ಸೋಮವಾರಪೇಟೆ,ಅ.20: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಡಿನ ಧಾಳಿಯಾಗಿರುವ ಘಟನೆ ಪಟ್ಟಣ ಸಮೀಪದ ಕಾನ್ವೆಂಟ್ ಬಾಣೆಯಲ್ಲಿ ಇಂದು ಸಂಜೆ 7.50ಕ್ಕೆ ನಡೆದಿದ್ದು, ಗುಂಡೇಟಿಗೆ ಒಳಗಾದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾನ್ವೆಂಟ್ ಬಾಣೆ ನಿವಾಸಿ ಸುಜಿತ್ ಎಂಬಾತನ ಮೇಲೆ ಅದೇ ಗ್ರಾಮದ ಗಣೇಶ್ ಎಂಬಾತ ಗುಂಡಿನ ಧಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಸುಜಿತ್ ನ ಎದೆ ಭಾಗದ ಕೆಳಗೆ ಪಿಸ್ತೂಲಿನ ಬುಲೆಟ್ ಹೊಕ್ಕಿದ್ದು, ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಇಬ್ಬರ ನಡುವೆ ಯಾವದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದ್ದು, ಅವಾಚ್ಯ ಪದಗಳು ಬಳಕೆಯಾದ ಹಿನ್ನೆಲೆ ಗುಂಡಿನ ಧಾಳಿ ನಡೆದಿದೆ ಎನ್ನಲಾಗಿದೆ.