ಮಡಿಕೇರಿ, ಅ. 20: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂದು ಗುಡುಗು ಸಹಿತ ಮಳೆಯಾಗಿದೆ. ಮಡಿಕೇರಿಯಲ್ಲಿ ದಿಢೀರನೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಸಿದ್ದಾಪುರ ಸುತ್ತಮುತ್ತ ಭಾನುವಾರ ಅಪರಾಹ್ನ ನಂತರ ಧಾರಾಕಾರ ಮಳೆ ಸುರಿಯಿತು. ಭಾನುವಾರ ಸಂತೆ ದಿನವಾದ ಕಾರಣ ಮಳೆಗೆ ವ್ಯಾಪಾರಿಗಳು ಮಾರಾಟಕ್ಕೆ ತಂದ ವಸ್ತುಗಳು ನೀರಿಗೆ ಸಿಲುಕಿ ಸಮಸ್ಯೆ ಎದುರಾಗಿತ್ತು. ಕೆಲವು ವ್ಯಾಪಾರಿಗಳ ಮಳಿಗೆಗಳು ಮಳೆಗೆ ಸಿಲುಕಿ ನೆಲಕ್ಕೆ ಬೀಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗಾಗಲೇ ಸಿದ್ದಾಪುರ ಸುತ್ತಮುತ್ತಲಿನ ಅರೇಬಿಕಾ ಕಾಫಿ ಹಣ್ಣಾಗಿದ್ದು, ಮಳೆಗೆ ಉದುರಿ ಬೀಳುವ ಸಾಧ್ಯತೆ ಇದೆ. ಸಿದ್ದಾಪುರ - ಮಡಿಕೇರಿ ರಸ್ತೆ ಬದಿ ಬರೆಯ ಮಣ್ಣು ಕುಸಿದು, ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು.

ವೀರಾಜಪೇಟೆ - ಶ್ರೀಮಂಗಲ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕುಶಾಲನಗರ, ನಂಜರಾಯಪಟ್ಟಣ, ಕೊಪ್ಪ, ಶನಿವಾರಸಂತೆ, ನಂದಿಗುಂದ, ಗೌಡಳ್ಳಿ, ಗೋಪಾಲಪುರ, ಕರಿಕೆ ಭಾಗದಲ್ಲೂ ಮಳೆ ಸುರಿದಿದೆ.