ಶನಿವಾರಸಂತೆ, ಅ. 20: ಆರೋಪಿಯೋರ್ವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಹಿಂದಿರುಗುತ್ತಿದ್ದ ಸಂದರ್ಭ ಖಾಸಗಿ ವ್ಯಾನ್ (ಕೆಎ-02- ಝೆಡ್-0350) ಅಪಘಾತಕ್ಕೀಡಾಗಿ ಕರ್ತವ್ಯ ನಿರತ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಗೌಡಳ್ಳಿ ಗ್ರಾಮದ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಶನಿವಾರಸಂತೆ ಪೊಲೀಸ್ ಠಾಣೆಯ ಕಾನ್ಸ್‍ಟೇಬಲ್‍ಗಳಾದ ವಿ.ಎಂ. ಸಫೀರ್ ಹಾಗೂ ಪ್ರವೀಣ್ ಕುಮಾರ್ ಗಾಯಗೊಂಡವರು. ಇಬ್ಬರೂ ಕೂಡ ಆರೋಪಿಯೋರ್ವನನ್ನು ಚಾಲಕ ಜುನೈದ್ ಅವರ ವ್ಯಾನಿನಲ್ಲಿ ಕರೆದೊಯ್ದು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಮಡಿಕೇರಿ ಜೈಲಿನಲ್ಲಿ ಬಿಟ್ಟು ವಾಪಾಸ್ಸು ಬರುವಾಗ ಅಪಘಾತ ನಡೆದಿದೆ. ರಸ್ತೆ ಬದಿಯ ನೀರು ಹರಿಯುವ ಚರಂಡಿಗೆ ವ್ಯಾನ್ ಮಗುಚಿಕೊಂಡು ಚಾಲಕ ಸಹಿತ ಇಬ್ಬರು ಗಾಯಗೊಂಡಿದ್ದು, ಗ್ರಾಮಸ್ಥರು ತಕ್ಷಣ ಕಾರಿನಲ್ಲಿ ಕರೆದೊಯ್ದು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಲಕ ಜುನೈದ್‍ನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಕಾನ್ಸ್‍ಟೇಬಲ್‍ಗಳಾದ ಸಫೀರ್ ಹಾಗೂ ಪ್ರವೀಣ್ ಕುಮಾರ್ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದಲ್ಲಿ ಹೇಳಿಕೆ ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಕೃಷ್ಣ ನಾಯಕ್ ವ್ಯಾನ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.