ಕುಶಾಲನಗರ, ಅ. 20: ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಆಶ್ರಯದಲ್ಲಿ ಸ್ವಚ್ಚ ಕಾವೇರಿಗಾಗಿ 9ನೇ ವರ್ಷದ ತಲಕಾವೇರಿ ಪೂಂಪ್‍ಹಾರ್ ಕಾವೇರಿ ಜಾಗೃತಿ ಯಾತ್ರೆಗೆ ತಾ. 21 ರಿಂದ (ಇಂದಿನಿಂದ) ಚಾಲನೆ ದೊರೆಯಲಿದೆ.ತಲಕಾವೇರಿ ಕ್ಷೇತ್ರದಿಂದ ಪ್ರಾರಂಭಗೊಳ್ಳುವ ಯಾತ್ರೆ ನವೆಂಬರ್ 8ಕ್ಕೆ ನದಿ ಸಂಗಮವಾಗುವ ಬಂಗಾಳಕೊಲ್ಲಿಯ ಪೂಂಪ್‍ಹಾರ್ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ. ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ, ತಮಿಳುನಾಡು ಪ್ರಾಂತ್ಯದ ಸಾಧುಸಂತರು, ಕಾರ್ಯಕರ್ತರು ಭಾನುವಾರ ಜಿಲ್ಲೆಗೆ ಆಗಮಿಸಿದ್ದು (ಮೊದಲ ಪುಟದಿಂದ) ಜಿಲ್ಲೆಯ ಗಡಿಭಾಗ ಕುಶಾಲನಗರ ಬಳಿ ಸಾಧುಸಂತರ ತಂಡವನ್ನು ಬರಮಾಡಿಕೊಳ್ಳಲಾಯಿತು.ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ 30ಕ್ಕೂ ಅಧಿಕ ಸಾಧುಸಂತರು ಮತ್ತು ಕಾರ್ಯಕರ್ತರನ್ನು ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಕಾವೇರಿ ತೀರ್ಥ ನೀಡುವ ಮೂಲಕ ಬರಮಾಡಿಕೊಂಡರು. ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಅಕ್ಷಯ್ ಪನ್ಯಾಡಿ ಮತ್ತಿತರರು ಇದ್ದರು. ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಹೊರಡುವ ಯಾತ್ರೆ ತಂಡಕ್ಕೆ ಕಾವೇರಿ ಯಾತ್ರಾ ಸಮಿತಿಯ ಸಂಚಾಲಕ ವೇ. ಬ್ರ. ಡಾ. ಭಾನುಪ್ರಕಾಶ್ ಶರ್ಮ ಅವರು ಚಾಲನೆ ನೀಡುವರು.

ತಂಡದ ಸದಸ್ಯರು ಮೂಲ ಕಾವೇರಿಯಿಂದ ತೀರ್ಥ ಸಂಗ್ರಹಿಸಿ ನದಿ ತಟಗಳ ವ್ಯಾಪ್ತಿಗಳಲ್ಲಿ ತೆರಳುವ ಸಂದರ್ಭ ಹಲವೆಡೆ ಜೀವನದಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮಗಳೊಂದಿಗೆ ನ. 8 ರಂದು ಪೂಂಪ್‍ಹಾರ್ ಬಳಿ ಸಮುದ್ರದಲ್ಲಿ ಪವಿತ್ರ ಕಾವೇರಿ ತೀರ್ಥವನ್ನು ವಿಸರ್ಜನೆ ಮಾಡಲಾಗುವದು. ಸಮಾರೋಪದಲ್ಲಿ ಜೀವನದಿಯ ಸಂರಕ್ಷಣೆಗೆ ಕೈಗೊಳ್ಳುವ ನಿರ್ಣಯವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಗಮನಕ್ಕೆ ತರುವ ಮೂಲಕ ಆಗ್ರಹಿಸಲಾಗುವದು.

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡುವ ತಂಡ ಭಾಗಮಂಡಲ, ಬಲಮುರಿ ಮೂಲಕ ಮೂರ್ನಾಡು, ಸಿದ್ದಾಪುರ, ಕುಶಾಲನಗರ, ಕಣಿವೆ ಮಾರ್ಗವಾಗಿ ತೆರಳಿ ನಂತರ ರಾಮನಾಥಪುರಕ್ಕೆ ಸಾಗಲಿದೆ.