ಮಡಿಕೇರಿ, ಅ. 20: ಸರಿ ಸುಮಾರು 338 ವರ್ಷಗಳ ಇತಿಹಾಸ ಇರುವ ಮಡಿಕೇರಿಯ ಐತಿಹಾಸಿಕ ಅರಮನೆಯ ಆಡಳಿತವು ಇದೇ ತಾ. 31ಕ್ಕೆ ಅಂತ್ಯಗೊಳ್ಳಲಿದೆ. ರಾಜರುಗಳ ಆಳ್ವಿಕೆಯ ಬಳಿಕ ಬ್ರಿಟಿಷ್ ಸಾಮ್ರಾಜ್ಯವೂ ಇದೇ ಮಡಿಕೇರಿ ಕೋಟೆಯಲ್ಲಿರುವ ಅರಮನೆಯಲ್ಲಿ ಮುಂದುವರಿದಿತ್ತು. ಬ್ರಿಟಿಷರ ಬಳಿಕ ಸ್ವತಂತ್ರ ಕೊಡಗು ‘ಸಿ’ ರಾಜ್ಯದ ಶಾಸನ ಸಭೆಗಳು ಇಲ್ಲಿ ಮುಂದುವರಿದಿತ್ತು.ಅನಂತರದಲ್ಲಿ ಕೊಡಗು ವಿಶಾಲ ಕರ್ನಾಟಕದೊಂದಿಗೆ ವಿಲೀನ ಗೊಂಡು, ಕೊಡಗು ಜಿಲ್ಲಾಡಳಿತ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿ ಸುತ್ತಿತ್ತು. ನಾಲ್ಕಾರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಸಹಿತ ಬಹುತೇಕ ಇಲಾಖೆಗಳು ನೂತನ ವಾಗಿ ತಲೆಯೆತ್ತಿದ್ದ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿತು.ಇದೀಗ ಇದೇ ತಾ. 31ರೊಳಗೆ ಕೊಡಗು ಜಿ.ಪಂ. ಆಡಳಿತ ಸಹಿತ ಜನಪ್ರತಿನಿಧಿಗಳ
(ಮೊದಲ ಪುಟದಿಂದ) ಕಚೇರಿಗಳು ತಾ. 25 ರಂದು ಲೋಕಾರ್ಪಣೆಗೊಳ್ಳಲಿರುವ ನೂತನ ಜಿ.ಪಂ. ಆಡಳಿತ ಭವನಕ್ಕೆ ಸ್ಥಳಾಂತರಗೊಳ್ಳಲಿವೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು ‘ಶಕ್ತಿ’ ಯೊಂದಿಗೆ ಈ ಕುರಿತು ಖಚಿತಪಡಿಸಿದ್ದಾರೆ.
ತಾ. 25 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಗಾಲ್ಫ್ ಬಳಿಯ ನೂತನ ಜಿ.ಪಂ. ಆಡಳಿತ ಭವನ ಉದ್ಘಾಟಿಸಿದ ಬೆನ್ನಲ್ಲೇ ಹಾಲೀ ಕೋಟೆಯ ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರ ಗೊಳಿಸಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯೋತ್ಸವಕ್ಕೆ ಕಾರ್ಯಾರಂಭ
ನೂತನ ಆಡಳಿತ ಭವನದಲ್ಲಿ ನ. 1 ರಂದು ಕನ್ನಡ ರಾಜ್ಯೋತ್ಸವ ನಡುವೆ ಕಚೇರಿ ಕೆಲಸಗಳಿಗೆ ಚಾಲನೆ ಲಭಿಸಲಿರುವದಾಗಿ ತಿಳಿಸಿದ ಅವರು, ಜಿ.ಪಂ. ಆಡಳಿತ ಸಂಬಂಧ ಎಲ್ಲ ಕೀಲಿಗಳನ್ನು ಇದೇ ತಾ. 31ಕ್ಕೆ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡುವದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನವೆಂಬರ್ನಿಂದ ತಮ್ಮ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಹಿತ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲೆಯ ಶಾಸಕರು, ಮೇಲ್ಮನೆ ಸದಸ್ಯರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಿಗೂ ನೂತನ ಭವನದಲ್ಲಿ ವ್ಯವಸ್ಥೆ ಕಲ್ಪಿಸುವದಾಗಿ ಕೆ. ಲಕ್ಷ್ಮೀಪ್ರಿಯ ವಿವರಿಸಿದ್ದಾರೆ.
ಅಂತೆಯೇ ಕೊಡಗು ಜಿ.ಪಂ. ಕಚೇರಿ ವ್ಯವಹಾರಗಳಿಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಇಲಾಖಾವರು ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರು ನೂತನ ಭವನದಲ್ಲಿ ಸಂದರ್ಶಿಸಲು ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗುವದು ಎಂದು ಅವರು ಭರವಸೆ ನೀಡಿದ್ದಾರೆ.