ಶ್ರೀನಗರ,ಅ.20: ಭಾರತದಿಂದ ಪಾಕ್ ಆಕ್ರಮಿತ (ಪಿಒಕೆ) ಪ್ರದೇಶ ದಲ್ಲಿನ ಕೆಲವು ಉಗ್ರ ನೆಲೆಗಳನ್ನು ನಾಶಗೊಳಿಸಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿದ್ದ ಪಾಕ್‍ನ ನಾಲ್ಕು ಉಡಾವಣಾ ಲಾಂಚ್ ಪ್ಯಾಡ್‍ಗಳನ್ನು ಭಾರತೀಯ ಸೇನೆಯ ಯೋಧರು ನಾಶಗೊಳಿಸಿದ್ದಾರೆ ಎಂದು ಭಾರತೀಯ ಸೇನೆಯ ಪ್ರಧಾನ ದಂಡನಾಯಕ ಬಿಪಿನ್ ರಾವತ್ ತಿಳಿಸಿದ್ದಾರೆ. ಅಲ್ಲದೆ ಸುಮಾರು 6 ರಿಂದ 10 ಮಂದಿ ಪಾಕ್ ಸೈನಿಕರು ಹಾಗೂ ಸುಮಾರು 6 ರಿಂದ 10 ಮಂದಿ ಜೈಷ್-ಎ ಮೊಹಮ್ಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉಗ್ರರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಅಂತೂ ಅಂದಾಜಿನ ಪ್ರಕಾರ ಒಟ್ಟು ಸುಮಾರು 35 ಮಂದಿ ಶತ್ರುಗಳು ಹತರಾಗಿರಬಹುದಾಗಿ ಹೇಳಲಾಗಿದೆ.
ತಂಗ್‍ದರ್ ವಲಯದ ಎದುರು ಇರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ಫಿರಂಗಿ ಬಂದೂಕುಗಳಿಂದ ದಾಳಿ ನಡೆಸಿದೆ. ಈ ಶಿಬಿರಗಳು ಭಾರತಕ್ಕೆ ಉಗ್ರರನ್ನು ಕಳಿಸುವಲ್ಲಿ ಸಕ್ರಿಯವಾಗಿದ್ದವು. ಖಚಿತ ಮಾಹಿತಿ ಮೇರೆಗೆ ಭಾರತೀಯ ಯೋಧರು ಹಲವು ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದ್ದು ಸ್ಥಳದಲ್ಲಿ ಅಪಾರ ಹಾನಿಯುಂಟಾಗಿದೆ.
ಇಂದು ಕುಪ್ವಾರಾ ಜಿಲ್ಲೆಯ ತಂಗ್‍ದರ್ ವಲಯದಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ಸೇನೆಯ ಇಬ್ಬರು ಯೋಧರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದರು. ಈ ಘಟನೆಯ
(ಮೊದಲ ಪುಟದಿಂದ) ಬಳಿಕ ಭಾರತೀಯ ಸೇನೆಯು ಉಗ್ರರು ನುಸುಳಲು ಸಹಾಯ ಮಾಡುತ್ತಿದ್ದ ಸಕ್ರಿಯ ಶಿಬಿರಗಳನ್ನು ಗುರುತಿಸಿ ಫಿರಂಗಿ ದಾಳಿ ನಡೆಸಿದೆ.
ಮಧ್ಯಾಹ್ನ ಪಾಕ್ ಆಕ್ರಮಿತ ಕಾಶ್ಮೀರದ ಒಳನುಗ್ಗಿದ ಭಾರತೀಯ ಸೇನೆ ಭಯೋತ್ಪಾದಕರು ಹಾಗೂ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಭಾರತೀಯ ಸೈನಿಕರ ಹತ್ಯೆ ಬೆನ್ನಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಸೈನಿಕರು ಅಲ್ಲಿ ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸೇನೆ ತನ್ನ ಆರ್ಟಿಲರಿ ಗನ್‍ಗಳ ಮೂಲಕ ಉಗ್ರ ಕ್ಯಾಂಪ್‍ಗಳ ಮೇಲೆ ದಾಳಿ ಮಾಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವೇಳೆ ಉಗ್ರರ ಕ್ಯಾಂಪ್ ಬಳಿ ಗಸ್ತು ತಿರುಗುತ್ತಿದ್ದ ಪಾಕಿಸ್ತಾನ ಸೈನಿಕರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಭಾರತದ ಪ್ರತಿ ದಾಳಿಯಲ್ಲಿ ಪಾಕಿಸ್ತಾನದ ಸೇನಾ ಪೋಸ್ಟ್‍ಗಳಿಗೆ ಹಾನಿಯಾಗಿದ್ದು, ಹಲವರಿಗೆ ಗಾಯಗಳಾಗಿವೆ. ಈ ವರ್ಷದ ಜನವರಿಯಿಂದ ಅಕ್ಟೋಬರ್ ತನಕ ಪಾಕಿಸ್ತಾನವು ಎರಡು ಸಾವಿರದ ಮುನ್ನೂರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಕಳೆದ ವರ್ಷ ಈ ಪ್ರಮಾಣವು ಸಾವಿರದ ಆರು ನೂರಕ್ಕೂ ಸ್ವಲ್ಪ ಹೆಚ್ಚಿತ್ತು.
ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿದೆ. ಭಾರತೀಯ ಗಡಿಯೊಳಗೆ ಉಗ್ರರು ನುಸುಳಲು ಅನುವು ಮಾಡಿಕೊಟ್ಟಿದ್ದ ಪಾಕ್ ಸೇನೆ, ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ.
ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸುವ ಪಾಕ್ ಸೇನೆ, ಭಾರತೀಯ ಸೇನೆಯ ಗಮನವನ್ನು ಬೇರೆಡೆಗೆ ಸೆಳೆದು ಗಡಿಯೊಳಗೆ ಉಗ್ರರನ್ನು ನುಗ್ಗಿಸುತ್ತಿದೆ. ತಂಗಧರ್ ವಲಯದಲ್ಲಿ ನಡೆಯುತ್ತಿದ್ದ ಪಾಕಿಸ್ತಾನದ ಈ ದುಸ್ಸಾಹಸಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ. ಭಾರತ ಮತ್ತು ಪಾಕ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಸೇನೆ, ನಾಗರಿಕರನ್ನೇ ತನ್ನ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹಾನಿ ಮಾಡಲು ಮುಂದಾಗಿದೆ. ಭಾರತ ಮತ್ತು ಪಾಕ್ ಗಡಿಯಲ್ಲಿರುವ ಮನ್ಯಾರಿ ಎಂಬ ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಮನ್ಯಾರಿ ಗ್ರಾಮ ಕಟುವಾ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಶನಿವಾರ ತಡರಾತ್ರಿ ಹಾಗೂ ಭಾನುವಾರ ಮುಂಜಾನೆವರೆಗೂ ನಡೆದ ದಾಳಿಯಿಂದಾಗಿ ಮನೆ ಯೊಂದು ಸಂಪೂರ್ಣವಾಗಿ ಛಿದ್ರಛಿದ್ರವಾಗಿದೆ. ಅಕ್ಕಿ ಗೋದಾಮು ಕೂಡಾ ಹಾಳಾಗಿದೆ. 2 ವಾಹನಗಳು, ದನದ ಕೊಟ್ಟಿಗೆ ಹಾಗೂ 19 ಹಸುಗಳು ಜೀವಬಿಟ್ಟಿವೆ.
ಪಾಕಿಸ್ತಾನ ಸೇನೆ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸುವ ದರಿಂದ ಇಲ್ಲಿನ ಜನರ ರಕ್ಷಣೆ ಭಾರತೀಯ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಾಕಿಸ್ತಾನ ಸೇನೆ ಜನ ವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸುವ ಕಾರಣ, ಸ್ಥಳೀಯರು ಬಂಕರ್‍ಗಳಲ್ಲಿ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಸಂಜೆ 7 ಗಂಟೆಗೆ ಆರಂಭವಾಗುವ ಗುಂಡಿನ ದಾಳಿ ಮರುದಿನ ಬೆಳಗಿನ ಜಾವದವರೆಗೂ ನಿರಂತರವಾಗಿ ನಡೆಯುತ್ತಿರುತ್ತದೆ. ನಮಗೆ ನಮ್ಮ ಮಕ್ಕಳ ಜೀವ ರಕ್ಷಣೆಯೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯರು.