ಭಾಗಮಂಡಲ, ಅ. 18: ಪ್ರತಿವರ್ಷ ಕೊಡಗು ಮಾತ್ರ ವಲ್ಲದೆ ಹೊರಜಿಲ್ಲೆ, ರಾಜ್ಯಗಳಿಂದ ತಂಡೋಪತಂಡವಾಗಿ ಯಾತ್ರಾರ್ಥಿಗಳ ಆಗಮನದೊಂದಿಗೆ ಕಳೆಕಟ್ಟುತ್ತಿದ್ದ ತುಲಾ ಸಂಕ್ರಮಣದ ಕಾವೇರಿ ಜಾತ್ರೆ; ಈ ವರ್ಷದ ಮಳೆಯೊಂದಿಗೆ ಮಂಕಾಗಿರುವ ದೃಶ್ಯ ಎದುರಾಯಿತು. ತಾ. 18ರ ಮುಂಜಾವಿನ 12.57 ಗಂಟೆಗೆ ಶುಭ ಮುಹೂರ್ತದಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಬ್ರಹ್ಮ ಕುಂಡಿಕೆ ಯಿಂದ ಆವಿರ್ಭವಿಸಿದರೆ; ಪ್ರಸಕ್ತ ಮೂರ್ನಾಲ್ಕು ಸಾವಿರ ಸದ್ಭಕ್ತರು ಸಂಗಮಗೊಂಡಂತೆ ಗೋಚರಿಸಿತು.ಬೆಳಗಿನ ಜಾವದಿಂದ ಮಧ್ಯಾಹ್ನ ತನಕವೂ ಕೊಡಗಿಗೆ ಸೀಮಿತವೆಂಬಂತೆ ಸ್ಥಳೀಯ ಭಕ್ತರಷ್ಟೇ ಸಾವಿರಾರು ಸಂಖ್ಯೆ ಯಲ್ಲಿ ನಿರಂತರ ಆಗಮನದೊಂದಿಗೆ; ಕುಟುಂಬವಾರು ಸ್ನಾನ, ಪೂಜೆ ಬಳಿಕ ನಿರ್ಗಮಿಸುತ್ತಿದ್ದದ್ದು ಕಂಡು ಬಂತು. ತಡರಾತ್ರಿ ತೀರ್ಥೋದ್ಭವ ಕೆಲವೊತ್ತು ವರುಣ ಕೃಪೆ ತೋರಿದರೂ; ಆಗಿಂದಾಗ್ಗೆ ಮಳೆ ಸುರಿಯುತ್ತಲೇ ಇತ್ತು.ಹೀಗಾಗಿ ಕ್ಷೇತ್ರಕ್ಕೆ ಆಗಮಿಸುವ ಸದ್ಭಕ್ತರ ಸಂಖ್ಯೆ ತೀರಾ ಕ್ಷೀಣವಿತ್ತು. ಎಲ್ಲಿ ನೋಡಿದರೂ ತಲಕಾವೇರಿ - ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ಖಾಕಿ ಪಡೆಯ ಕಣ್ಗಾವಲು ಹೊರತು; ಸ್ವಂತ ವಾಹನಗಳಲ್ಲಿ ಬಂದು ಹೋಗುತ್ತಿದ್ದ ಜಿಲ್ಲೆಯ ಮಂದಿ ಎದುರುಗೊಳ್ಳುತ್ತಿದ್ದರು.
ಅನ್ನದಾನಕ್ಕೂ ಅಷ್ಟೇ : ನಿನ್ನೆಯಿಂದಲೇ ತಲಕಾವೇರಿ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗದಿಂದ ನಿರಂತರವಾಗಿ ಉಪಹಾರ, ಕಾಫಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು; ಹೀಗಿದ್ದು, ಈ ಮಧ್ಯಾಹ್ನದ ತನಕ ಅನ್ನ ಪ್ರಸಾದ ಸೇವಿಸಿರುವ ಭಕ್ತರ ಸಂಖ್ಯೆ ಸುಮಾರು ನಾಲ್ಕೈದು ಸಾವಿರ ಮಂದಿಯೆಂದು; ರಂಗದ ಪ್ರಮುಖ ತಮ್ಮು ಪೂವಯ್ಯ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದರು. ಕೈಲಾಸ ಆಶ್ರಮ ಹಾಗೂ ಅದರ ಮುಂಭಾಗ ಮಂಡ್ಯ ಜಿಲ್ಲೆಯ ಪ್ರಮುಖರು ಪ್ರತ್ಯೇಕ ಅನ್ನದಾನ ಏರ್ಪಡಿಸಿದ್ದು, ಗೋಚರಿಸಿತು.
ಬಸ್‍ಗಳು ವಿರಳ : ತುಲಾ ಸಂಕ್ರಮಣ ಕಾವೇರಿ ಜಾತ್ರೆಯ ಪ್ರಯುಕ್ತ ಸದ್ಭಕ್ತರಿಗಾಗಿ ರಾಜ್ಯ ಸಾರಿಗೆ ಸಂಸ್ಥೆಯಿಂದ; ಭಾಗಮಂಡಲ - ತಲಕಾವೇರಿ ನಡುವೆ ಬಸ್‍ಗಳನ್ನು ನಿಯೋಜಿಸಲಾಗಿತ್ತು. ಆ ಮುಖಾಂತರ ಸುಮಾರು 45 ಬಾರಿ ಬಸ್‍ಗಳ ಓಡಾಟ ನಡೆದಿದ್ದಾಗಿ ಮೂಲಗಳು ತಿಳಿಸಿವೆ. ಅಲ್ಲದೆ ಅಂದಾಜು 800 ರಿಂದ ಒಂದು ಸಾವಿರ ಖಾಸಗಿ ವಾಹನಗಳು ಸಂಚರಿಸಿವೆ.
ಉಭಯ ಕ್ಷೇತ್ರಗಳಿಗೆ ಆಗಮಿಸಿದ ಭಕ್ತರು ಮಳೆಯ ನಡುವೆಯೂ ಕಾವೇರಿ ಮಾತೆಯೊಂದಿಗೆ ಸನ್ನಿಧಿಯ ಇತರ ದೇವತೆಗಳ ದರ್ಶನಗೈದು ನಿರಾಳವಾಗಿ ತಿರುಗಾಡುತ್ತಿದ್ದ ಸನ್ನಿವೇಶ ಎದುರಾಯಿತು.
ಇಲಾಖೆಗಳ ಪ್ರಚಾರ : ಜಿಲ್ಲಾಡಳಿತದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಕ್ರಮಗಳ ಕುರಿತು; ಅಲ್ಲಲ್ಲಿ ಪ್ರದರ್ಶನಗಳನ್ನು ಏರ್ಪಡಿಸಿ ಪ್ರಚಾರದೊಂದಿಗೆ ಜನಜಾಗೃತಿ ಮೂಡಿಸುತ್ತಿದ್ದ ಅಂಶಗಳು ಗಮನ ಸೆಳೆದವು.
(ಮೊದಲ ಪುಟದಿಂದ)
ಭಕ್ತಿಗೀತೆಗಳ ಗಾಯನ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಪರಿಷತ್ತು ಹಾಗೂ ಭಾಗಮಂಡಲ ಹೋಬಳಿ ಘಟಕದ ವತಿಯಿಂದ ಸನ್ನಿಧಿಯಲ್ಲಿ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಗಾಯಕ ಶಾಂತಳ್ಳಿ ಗಣೇಶ್ ಹಾಡುವ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯ ಕೆದಂಬಾಡಿ ರಮೇಶ್, ಡಿವೈಎಸ್‍ಪಿ ದಿನೇಶ್, ವಿಶೇಷ ನಿರೀಕ್ಷಕ ಐ.ಪಿ. ಮೇದಪ್ಪ, ಭಾಗಮಂಡಲ ಠಾಣಾಧಿಕಾರಿ ಮಹದೇವ್, ಪೊನ್ನಂಪೇಟೆ ಕಸಾಪ ಅಧ್ಯಕ್ಷ ಡಾ. ಚಂದ್ರಶೇಖರ್, ತಲಕಾವೇರಿ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಇದ್ದರು. ಪರಿಷತ್ತಿನ ಸದಸ್ಯರುಗಳಾದ ಬಿ.ಎಸ್. ಪರಮೇಶ್ವರ್, ಮಾಲಾದೇವಿ ಮೂರ್ತಿ, ಕೇಕಡ ಇಂದುಮತಿ ರವೀಂದ್ರ, ಶ್ರೇಯಸ್, ಕವಿತಾ, ಗಾಯಕರುಗಳಾದ ಸುಧಾ, ಚಂದ್ರಕಲಾ, ಬಾಲ ಕಲಾವಿದರಾದ ವಿಜಯ್‍ಕುಮಾರ್, ಅನ್ವಿತ್‍ಕುಮಾರ್, ಕುಡೆಕಲ್ ನಿಹಾಲ್, ಆರೋಗ್ಯ ಇಲಾಖೆಯ ಲೀಲಾವತಿ ಅವರುಗಳು ಭಕ್ತಿಗೀತೆಗಳನ್ನು ಹಾಡುವದರ ಮೂಲಕ ಭಕ್ತರನ್ನು ಭಕ್ತಿಪರವಶನ್ನಾಗಿಸಿದರು. ಶಕ್ತಿ ಪತ್ರಿಕೆ ವ್ಯವಸ್ಥಾಪಕಿ ಜಿ.ಆರ್. ಪ್ರಜ್ಞಾ, ಕಾರ್ಯನಿರ್ವಾಹಕ ವ್ಯವಸ್ಥಾಪಕ ಪ್ರಜ್ವಲ್, ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಅವರುಗಳು ಪ್ರಶಂಸನಾ ಪತ್ರ ನೀಡಿ ಕಲಾವಿದರನ್ನು ಗೌರವಿಸಿದರು. ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿದರೆ, ಭಾಗಮಂಡಲ ಹೋಬಳಿ ಅಧ್ಯಕ್ಷ ಎ.ಎಸ್. ಶ್ರೀಧರ್ ನಿರೂಪಿಸಿದರು.
ಒಟ್ಟಿನಲ್ಲಿ ಈ ಬಾರಿಯ ತುಲಾ ಸಂಕ್ರಮಣ ಕಾವೇರಿ ಜಾತ್ರೆ ಹಿಂದಿನ ವರ್ಷಗಳಂತೆ ಸದ್ಭಕ್ತರ ಸಮಾಗಮದೊಂದಿಗೆ ಕಳೆಕಟ್ಟುವ ಬದಲಿಗೆ; ವರುಣನ ಮುನಿಸು ನಡುವೆ ಮಂಕಾದಂತೆ ಪ್ರಥಮ ದಿನದಂದು ಗೋಚರವಾಯಿತು.
ಜೈ ಜೈ ಮಾತಾ.., ಕಾವೇರಿ ಮಾತಾ...
ಕನ್ನಡ ನಾಡಿನ ಜೀವನದಿ ಅನ್ನದಾತೆ ಮಾತೆ ಕಾವೇರಿಯು ಕಳೆದ ರಾತ್ರಿ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಮುಂಚಿತವಾಗಿ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರುಶನ ನೀಡಿದಳು.ಕಾವೇರಿ ದರುಶನಕ್ಕಾಗಿ ಕಾದು ನಿಂತಿದ್ದ ಭಕ್ತವೃಂದ ಪಾಪ ವಿನಾಶಿಯ ದರುಶನ ಪಡೆದು ಪುನೀತರಾದರು. ತೀರ್ಥೋದ್ಭವಕ್ಕೆ 45 ನಿಮಿಷ ಇರುವಂತೆಯೆ ‘ಜೈ ಜೈ ಮಾತಾ ಕಾವೇರಿ ಮಾತಾ’ ಎಂಬ ಘೋಷಣೆಗಳೊಂದಿಗೆ ಭಕ್ತರು ಕೊಳಕ್ಕೆ ಧುಮುಕುವ ಪ್ರಯತ್ನಕ್ಕೆ ಮುಂದಾದರು. ಈ ವೇಳೆ ಪೊಲೀಸರು ತಡೆಯಲು ಪ್ರಯತ್ನಿಸಿದಾಗ ನೂಕಾಟ ತಳ್ಳಾಟ ನಡೆಯಿತು. ಈ ನಡುವೆ 12.20 ಗಂಟೆ ಸುಮಾರಿಗೆ ಭಕ್ತನೊಬ್ಬ ಬ್ಯಾರಿಕೇಡ್ ಹಾರಿ ಕೊಳಕ್ಕೆ ಧುಮುಕಿದಾಗ ನೆರೆದಿದ್ದ ಉಸ್ತುವಾರಿ ಸಚಿವರಾದಿಯಾಗಿ ಪೊಲೀಸರು, ಭಕ್ತರು ಮೂಕ ಪ್ರೇಕ್ಷಕರಾಗಿದ್ದರು.
ಕುಂಡಿಕೆ ಮೇಲ್ಭಾಗದಲ್ಲಿ ಭಕ್ತಾದಿಗಳು ಬಿಂದಿಗೆ ಹಿಡಿದು ತಡೆಗೋಡೆ ಹಾರಲು ಪ್ರಯತ್ನ, ಡಿವೈಎಸ್ಪಿ ದಿನೇಶ್ ಕುಮಾರ್ ತೆರಳಿ ಸಮಾಧಾನಪಡಿಸಿ ಸ್ಟೀಲ್ ಬಿಂದಿಗೆ ಹಿಡಿದ ಒಂದಷ್ಟು ಭಕ್ತರನ್ನ ಒಳಬಿಟ್ಟು ಕುಂಡಿಕೆಬಳಿಯ ಮೆಟ್ಟಿಲಲ್ಲಿ ಕುಳ್ಳಿರಿಸಿದರು. ತೀರ್ಥೋದ್ಭವ ಸಂದರ್ಭದಲ್ಲಿ ಕುಂಡಿಕೆ ಬಳಿ ತಕ್ಕ ಮುಖ್ಯಸ್ಥರು, ಅರ್ಚಕರು ಹಾಗೂ ಪೊಲೀಸರನ್ನು ಬಿಟ್ಟರೆ ಉಳಿದವರು ತೆರಳಲು ಯಾವದೇ ಅವಕಾಶ ಇರಲಿಲ್ಲ.
ಮಾಧ್ಯಮದವರ ಅಸಮಾಧಾನ
ಪ್ರತಿವರ್ಷ ಮಾಧ್ಯಮದವರಿಗೆ ಕಾಯ್ದಿರಿಸಿದ ಜಾಗವನ್ನು ಈ ಬಾರಿ ವಿಐಪಿಗಳಿಗೆ ಮೀಸಲಿರಿಸಿದ್ದರಿಂದ ಮಾಧ್ಯಮದವರು ಕೇವಲ ಇಪ್ಪತ್ತು ಮಂದಿ ನಿಂತುಕೊಳ್ಳಬಹುದಾದ ಇಕ್ಕಟ್ಟಿನ ಜಾಗದಲ್ಲಿ ಚಿತ್ರೀಕರಣಕ್ಕೆ ಪರದಾಡುವಂತಾಯಿತು. ಆರಂಭದಲ್ಲಿ ಕುಂಡಿಕೆ ಸಮೀಪ ಛಾಯಾಚಿತ್ರ ತೆಗೆಯಲು ಮಾಧ್ಯಮದವರಿಗೆ ಅವಕಾಶ ನಿರಾಕರಿಸಲಾಗಿತ್ತಾದರೂ ಆ ನಂತರ ಮಾಧ್ಯಮ ಪ್ರತಿನಿಧಿಗಳ ಸಾಮೂಹಿಕ ಆಗ್ರಹದ ಬಳಿಕ ಅವಕಾಶ ಕಲ್ಪಿಸಲಾಯಿತು. ಕುಂಡಿಕೆ ಬಳಿ ಬಿಡದ ಕಾರಣ ಭಕ್ತಾದಿಗಳು ಆಕ್ರೋಶ ಭರಿತ ಘೋಷಣೆ ಕೂಗಿದರು. ಮಹಿಳೆಯೊಬ್ಬರು ಕಾವೇರಿ ಮಾತೆಗೆ ಸೀರೆ ಅರ್ಪಿಸಲು ತೆರಳಿದಾಗ ಪೊಲೀಸರು ತಡೆಯೊಡ್ಡಿ ಹಿಂದಕ್ಕೆ ಕಳುಹಿಸಿದ ಘಟನೆ ನಡೆಯಿತು.
ಪ್ಲಾಸ್ಟಿಕ್ ಬಿಂದಿಗೆಗಳು ಬಂದಿದ್ದವು !
ಸ್ಟೀಲ್ ಬಿಂದಿಗೆ, ತಾಮ್ರದ ಬಿಂದಿಗೆ ಹೊರತುಪಡಿಸಿ ಈ ಬಾರಿ ಪ್ಲಾಸ್ಟಿಕ್ ಬಿಂದಿಗೆ ಹಾಗೂ ಬಾಟಲಿಗಳನ್ನು ತೀರ್ಥ ಕೊಂಡೊಯ್ಯಲು ಬಳಸಬಾರದೆಂದು ದೇವಾಲಯ ವ್ಯವಸ್ಥಾಪನಾ ಸಮಿತಿ ನಿಷೇಧ ಹೇರಿತ್ತಾದರೂ ತೀರ್ಥೋದ್ಭವದ ವೇಳೆ ಪ್ಲಾಸ್ಟಿಕ್ ಬಿಂದಿಗೆಗಳು, ಬಾಟಲಿಗಳಲ್ಲಿ ಕೆಲವು ಭಕ್ತರು ತೀರ್ಥ ಕೊಂಡೊಯ್ಯುತ್ತಿದ್ದುದು ಕಂಡುಬಂತು. ದೇವಾಲಯದ ಆವರಣದಲ್ಲೇ ಪ್ಲಾಸ್ಟಿಕ್ ಕ್ಯಾನ್‍ಗಳ ಮಾರಾಟ ಇತ್ತು.
ಕೊಡಗಿನ ಒಳಿತಿಗೆ ಪ್ರಾರ್ಥನೆ - ಅಶೋಕ್
ಮೊದಲ ಬಾರಿಗೆ ಮಾತೆ ಕಾವೇರಿ ತಾಯಿಯ ದರ್ಶನವನ್ನು ಕುಟುಂಬ ಸಮೇತವಾಗಿ ಕಣ್ತುಂಬಿಕೊಂಡಿದ್ದು ಕೊಡಗು, ಬೆಂಗಳೂರು, ಹಳೆ ಮೈಸೂರು ಭಾಗದ ರೈತರಿಗೆ ಒಳಿತಾಗಲಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ಮತ್ತೆ ಮರುಕರುಳಿಸದಿರಲಿ ಎಂದು ಕಾವೇರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ತಲಕಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರಮುಖರ ಆಣೆ ಪ್ರಮಾಣದ ರಾಜಕೀಯ ಹೆಚ್ಚಾಗುತ್ತಿದೆ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಸಚಿವರು ಆಣೆ ಪ್ರಮಾಣದ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ದೇವರ ಪ್ರದರ್ಶನ ನಮ್ಮ ಸಂಸ್ಕೃತಿಯಲ್ಲ; ಆಣೆ ಪ್ರಮಾಣವನ್ನು ಅವರವರ ಮನೆಯಲ್ಲಿ ಮಾಡಿಕೊಳ್ಳಲಿ ಎಂದು ಕುಟುಕಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ - ಸೋಮಣ್ಣ
ಅಗಸ್ತ್ಯ ಮುನಿಗಳು ತಪಸ್ಸನ್ನಾ ಚರಿಸಿದ ತಪೋಭೂಮಿಯಲ್ಲಿ ಧಾರ್ಮಿಕ ಪರಂಪರೆಯಂತೆ ಈ ಪದ್ಧತಿಯನ್ನು ಆಚರಿಸಿಕೊಂಡು ಬರುವ ಕೊಡಗಿನ ಜನತೆ ಪುಣ್ಯವಂತರು. ದೇಶಕ್ಕೂ ಕೊಡಗಿನ ಜನರ ಸೇವೆ ಅಪಾರ ಭಾರತದ ಸಂಸ್ಕೃತಿ ವಿಶ್ವಕ್ಕೆ ಮಾದರಿ ಅನ್ನುವದಕ್ಕೆ ತಾಯಿ ಕಾವೇರಿ ತೀರ್ಥೋದ್ಭವವೇ ಸಾಕ್ಷಿ ಎಂದರು. ಅಲ್ಲದೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಕಾರ್ಯಕ್ರಮ ರೂಪಿಸುವದಾಗಿ ಕೊಡಗು ಜಿಲ್ಲಾ ಉಸ್ತವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ರಾಮ ಮೋಹನ್ ರಾಜ್, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಮ್ಮಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಜಿ.ಪಂ.ಸಿಇಒ ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಉಪವಿಭಾಗಾದಿ üಕಾರಿ ಜವರೇಗೌಡ, ತಹಶೀಲ್ದಾರ್ ಮಹೇಶ್ ತೀರ್ಥೋದ್ಭವ ಸಂದರ್ಭ ಹಾಜರಿದ್ದರು.