ಕುಶಾಲನಗರ, ಅ. 18: ಶೀಲ ಶಂಕಿಸಿ ಪತ್ನಿ ಯನ್ನು ಪತಿಯೇ ಹತ್ಯೆ ಮಾಡಿ ಶವ ವನ್ನು ಹೂತು ಹಾಕಿದ್ದ ಪ್ರಕರಣವೊಂದು ಪತ್ತೆಯಾಗಿದೆ. ಸಮೀಪದ ಬೈಲುಕೊಪ್ಪದ ಲಕ್ಷ್ಮಿಪುರ ಗ್ರಾಮದ ಭೈರಮ್ಮ ಮತ್ತು ಪುಟ್ಟಮಾದಯ್ಯ ಎಂಬವರ ಪುತ್ರಿ ನಾಗಮ್ಮ (19) ಮೃತ ಯುವತಿ. ಅದೇ ಗ್ರಾಮದ ಸೋಮೇಶ ಎಂಬವರ ಪುತ್ರ ನಾಗರಾಜ ಅಲಿಯಾಸ್ ಪವನ್ (19) ಎಂಬಾತನೆ ಆರೋಪಿ.
ಸಂಬಂಧಿಕರಾಗಿದ್ದ ಮೃತೆ ನಾಗಮ್ಮ ಮತ್ತು ಆರೋಪಿ ನಾಗರಾಜ ಬಾಲ್ಯದಿಂದಲೇ ಒಟ್ಟಿಗೆ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರ ವಿವಾಹಕ್ಕೆ ಕುಟುಂಬಸ್ಥರ ವಿರೋಧ ವ್ಯಕ್ತಗೊಂಡಿತ್ತು. ಈ ನಡುವೆ ವಿವಾಹಕ್ಕೂ ಮುನ್ನ ನಾಗಮ್ಮ ಗರ್ಭ ಧರಿಸಿದ ಕಾರಣ ನಾಗರಾಜನೊಂದಿಗೆ ಕಳೆದ 10 ದಿನಗಳ ಹಿಂದೆಯಷ್ಟೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮೃತ ನಾಗಮ್ಮಳಿಗೆ ಬೇರೆ ಯುವಕನೊಂದಿಗೆ ಸಂಬಂಧವಿದೆ ಎಂದು ಕ್ಯಾತೆ ತೆಗೆದ ನಾಗರಾಜ್ ಕಳೆದ ಅಕ್ಟೋಬರ್ 10 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಗ್ರಾಮದ ಸಮೀಪದ ಕರಿಕಲ್ಲುಗುಡ್ಡದ ಬಳಿ ತೆರಳಿ ಪತ್ನಿಯನ್ನು ಕರೆಸಿಕೊಂಡಿದ್ದಾನೆ. ನಿನ್ನ ಹೊಟ್ಟೆಯಲ್ಲಿನ ಮಗು ಯಾರದು ಹೇಳು ಎಂದು ಚಿತ್ರ ಹಿಂಸೆ ಕೊಟ್ಟು ಅಲ್ಲೇ ಕಾಡು ಗಿಡದ ಬಡಿಗೆಯೊಂದ ರಿಂದ ಹಲ್ಲೆ ಮಾಡಿದ್ದಾನೆ. ಏಟು ತಡೆಯಲಾರದೆ ಪ್ರಜ್ಞೆ ತಪ್ಪಿದ ನಾಗಮ್ಮಳ ಕುತ್ತಿಗೆಗೆ ಅಲ್ಲೇ ಗುಡ್ಡದಲ್ಲಿ ಬೆಳೆದಿದ್ದ ಹಂಬೊಂದರಿಂದ ಬಿಗಿದು ಜೀವ ತೆಗೆದಿರುವದಾಗಿ ಪೊಲೀಸರು ತಿಳಿಸಿದ್ದಾರೆÉ. ಆಕೆ ಸಾವನ್ನಪ್ಪಿದ್ದು ಖಚಿತವಾದ ನಂತರ ಮರುದಿನ ಬೆಳಗ್ಗೆ ಒಬ್ಬನೇ ಗುಡ್ಡಕ್ಕೆ ತೆರಳಿ ಆಕೆಯ ಶವವನ್ನು ಬೃಹತ್ ಗಾತ್ರದ ಕರಿಕಲ್ಲು ಬಂಡೆಯ ಕೆಳಗೆ ಮಲಗಿಸಿ ಮಣ್ಣು ತಂದು ಮುಚ್ಚಿದ್ದಾನೆ. ಈ ನಡುವೆ ಮಗಳು ಕಾಣೆಯಾಗಿದ್ದಾಳೆ ಎಂದು ನಾಗಮ್ಮಳ ತಾಯಿ ಗಂಡ ನಾಗರಾಜನ ವಿರುದ್ಧ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೊಲೀಸ್ ತನಿಖೆ ವೇಳೆ ನಡೆದ ಕೃತ್ಯದ ಬಗ್ಗೆ ಆರೋಪಿ ನಾಗರಾಜ ತಪ್ಪೊಪ್ಪಿಕೊಂಡಿದ್ದು ಹುಣಸೂರು ಡಿವೈಎಸ್ಪಿ ಸುಂದರರಾಜ್, ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಪ್ರದೀಪ್, ತಾಲೂಕು ತಹಶೀಲ್ದಾರ್ ಶ್ವೇತಾ, ಬೈಲುಕೊಪ್ಪ ಠಾಣಾಧಿಕಾರಿ ಸವಿ ಮತ್ತಿತರರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಹುದುಗಿಸಿಟ್ಟಿದ್ದ ಯುವತಿಯ ಶವವನ್ನು ಕುಶಾಲ ನಗರದ ಸಮಾಜ ಸೇವಕ ಆಟೋ ಮುನೀರ್ ಸಹಾಯದಿಂದ ಹೊರ ತೆಗೆದರು. ಪಿರಿಯಾಪಟ್ಟಣ ತಾಲೂಕು ವೈದ್ಯಾಧಿಕಾರಿ ಡಾ. ನಾಗೇಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.