ಸೋಮವಾರಪೇಟೆ, ಅ.18: ನಿನ್ನೆ ದಿನ ನಿಧನರಾದ ಸೋಮವಾರಪೇಟೆ ವಿರಕ್ತ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಜಿಲ್ಲೆ ಸೇರಿದಂತೆ ಹೊರಭಾಗದ ಮಠಾಧೀಶರುಗಳ ಸಮ್ಮುಖದಲ್ಲಿ ಇಂದು ಮಠದ ಆವರಣದಲ್ಲಿ ನೆರವೇರಿತು.
ಸ್ವಾಮೀಜಿಗಳು ಈ ಮೊದಲೇ ನಿರ್ಮಿಸಿಕೊಂಡಿದ್ದ ಕ್ರಿಯಾ ಸಮಾಧಿಯಲ್ಲಿ, ಅವರ ಇಚ್ಛಾನುಸಾರ ಮಠದ ಭಕ್ತರು ಅಂತಿಮ ವಿಧಿವಿಧಾನ ನೆರವೇರಿಸಿದರು. ಮಠದ ಆವರಣದ ಒಳಗಿರುವ, ರುದ್ರಪ್ಪ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿಗಳ ಗದ್ದುಗೆಯ ನಡುಭಾಗದಲ್ಲಿ ವಿಶ್ವೇಶ್ವರ ಸ್ವಾಮೀಜಿ ಗಳನ್ನು ಕ್ರಿಯಾ ಸಮಾಧಿಯೊಳಗೆ ಸೇರಿಸಲಾಯಿತು.
ಮೂಲತಃ ತುಮಕೂರು ಜಿಲ್ಲೆ, ಪಾವಗಡದ ಹೊನ್ನಸಮುದ್ರ ಗ್ರಾಮದ ಹಿರೇಮಠ ರುದ್ರಮುನಿ ದೇವರು ಮತ್ತು ತಿಪ್ಪಮ್ಮ ಅವರ ಪುತ್ರರಾಗಿದ್ದ ವಿಶ್ವೇಶ್ವರ ಸ್ವಾಮೀಜಿಗಳು 1966ರಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭ ಸೋಮವಾರಪೇಟೆಗೆ ಆಗಮಿಸಿದರು.
ಪಟ್ಟಣದ ವಿರಕ್ತ ಮಠಾಧೀಶರಾಗಿದ್ದ ಗುರುಸಿದ್ಧ ಸ್ವಾಮೀಜಿಗಳ ಶಿಷ್ಯರಾಗಿಯೇ ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂದ ಮಾಡಿದರು. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಯಡಿಯೂರು ಕ್ಷೇತ್ರದಲ್ಲಿ ವೇದ ಸಂಸ್ಕøತ ಅಭ್ಯಾಸ ಮಾಡಿದರು.
1983ರಲ್ಲಿ ವಿರಕ್ತ ಮಠಾಧೀಶರಾಗಿ ಪಟ್ಟಕ್ಕೇರಿದ ವಿಶ್ವೇಶ್ವರ ಸ್ವಾಮೀಜಿಗಳು, ಜ್ಯೋತಿಷ್ಯ, ವಾಸ್ತು, ಸಂಖ್ಯಾ ಶಾಸ್ತ್ರ, ಪಂಚಾಂಗ, ಜಾತಕ ಫಲಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಮಠದಲ್ಲಿ ಹಿರಿಯ ಸ್ವಾಮೀಜಿಗಳ ಆರಾಧನೆ, ವೀರಶೈವ ವಟುಗಳಿಗೆ ಸಂಸ್ಕಾರ, ಬಸವ ಜಯಂತಿ, ಶಿವಾನುಭವ ಪರೀಕ್ಷೆ ಸೇರಿದಂತೆ ಇನ್ನಿತರ ಕಾರ್ಯ ಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿದ್ದರು.
ಕಳೆದ ಕೆಲ ಸಮಯಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಸ್ವಾಮೀಜಿಗಳು, ಕಳೆದ ವರ್ಷವೇ ಮಠದ ಆವರಣದಲ್ಲಿ ಕ್ರಿಯಾಸಮಾಧಿ ನಿರ್ಮಿಸಿದ್ದರು. ತಮ್ಮ ಕಾಲಾನಂತರ ಇತರರಿಗೆ ಸಮಸ್ಯೆಯಾಗಬಾರದು ಎಂದು ಕ್ರಿಯಾ ಸಮಾಧಿಗೆ ಬೇಕಿದ್ದ 2 ಲೋಡ್ ಮರಳು, ವಿಭೂತಿ ಸೇರಿದಂತೆ ಇತರ ಅಗತ್ಯಗಳನ್ನು ಸಂಗ್ರಹಿಸಿದ್ದರು.
ಇಂದು ಸ್ವಾಮೀಜಿಗಳ ಮೃತದೇಹವನ್ನು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೃತರ ಗೌರವಾರ್ಥ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಒಂದು ಗಂಟೆಗಳ ಕಾಲ ಮುಚ್ಚಿ ಸಂತಾಪ ಸೂಚಿಸಲಾಯಿತು.
ಮಠದ ಆವರಣದಲ್ಲಿ ಇಪ್ಪತ್ತೈದಕ್ಕೂ ಅಧಿಕ ಸ್ವಾಮೀಜಿಗಳು ಉಪಸ್ಥಿತರಿದ್ದು, ಸಂತಾಪ ಸಭೆಯ ಮೂಲಕ ಅಗಲಿದ ವಿಶ್ವೇಶ್ವರ ಸ್ವಾಮೀಜಿಗೆ ನುಡಿನಮನ ಸಲ್ಲಿಸಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಚಿತ್ರದುರ್ಗ ಮುರುಘಾ ಶರಣರು, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ರಾವಂದೂರು ಮಠದ ಮೋಕ್ಷಪತಿ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕುಮುದ ಧರ್ಮಪ್ಪ ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದು, ಲಿಂಗೈಕ್ಯ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದರು.