ಬೆಂಗಳೂರು, ಅ.18: ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿಶ್ವ ಕಾಫಿ ಸಮ್ಮೇಳನದ ಆತೀಥ್ಯವನ್ನು ಬೆಂಗಳೂರು ನಗರ ವಹಿಸಲಿದ್ದು, ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಸಮ್ಮೇಳನದ ಜವಾಬ್ದಾರಿ ವಹಿಸಿಕೊಂಡಿದ್ದು, ಕಾಫಿ ಉದ್ಯಮವನ್ನು ಲಾಭದಾಯಕವಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ‘ಬಳಕೆ ಮೂಲಕ ಸುಸ್ಥಿರತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ತಾ.17 ರಂದು ಬೆಂಗಳೂರು ಐಟಿಸಿ ವಿಂಡ್ಸರ್ ಹೋಟೆಲ್‍ನಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಅವರು ಸಮ್ಮೇಳನದ ಲಾಂಛನ ಮತ್ತು ಮಾಹಿತಿ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ರಾಜ್ಯದ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳು ಅತ್ಯಧಿಕ ಕಾಫಿ ಉತ್ಪಾದನೆ ಮಾಡುತ್ತಿದ್ದು, ಲಾಭದಾಯಕ ವಹಿವಾಟಿಗೆ ಖರೀದಿದಾರರು, ರಫ್ತುದಾರರು, ರೋಸ್ಟರ್‍ಗಳು ಮತ್ತು ಉದ್ಯಮಕ್ಕೆ ಪೂರಕವಾದ ಎಲ್ಲ ಮೂಲಗಳನ್ನು ಸಮ್ಮೇಳನದಲ್ಲಿ ಒಟ್ಟುಗೂಡಿಸಲಿದ್ದು, ಅತ್ಯುತ್ತಮ ಕಾರ್ಯಕ್ರಮವಾಗಿ ಮೂಡಿಬರಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ. ಕಾಫಿ ಉದ್ಯಮದ ಸವಾಲು ಗಳಿಗೆ ಪರಿಹಾರ ಕಂಡುಕೊಳ್ಳಲು ವಿಶ್ವ ಸಮ್ಮೇಳನ ವೇದಿಕೆಯಾಗಲಿ ಎಂದು ಶುಭಕೋರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಡಿಯಾ ಕಾಫಿ ಟ್ರಸ್ಟ್‍ನ ಅಧ್ಯಕ್ಷ ಅನಿಲ್‍ಕುಮಾರ್ ಭಂಡಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದೇ ಪ್ರಥಮ ಬಾರಿಗೆ ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿರುವ ಬೃಹತ್ ವಿಶ್ವ ಕಾಫಿ ಸಮ್ಮೇಳನಕ್ಕೆ ಪೂರಕ ಸಹಕಾರ ನೀಡಿವೆ. ಸುಮಾರು 80ಕ್ಕೂ ಅಧಿಕ ಕಾಫಿ ಉತ್ಪಾದಕ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸ ಲಿದ್ದು, ಮಹಾ ಸಮ್ಮೇಳನವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅಂತರಾಷ್ಟ್ರೀಯ ಕಾಫಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಜೋಸ್ ಡಾಸ್ಟರ್ ಸೆಟ್ಟೆ ಮಾತನಾಡಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕರ್ನಾಟಕ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಅವರು, ಕಾಫಿ ಉದ್ಯಮದಲ್ಲಿ ಭಾರತ ಪ್ರಮುಖ ತಾಣವಾಗಿ ಹೊರಹೊಮ್ಮಲು ವಿಶ್ವ ಸಮ್ಮೇಳನ ವೇದಿಕೆ ಸೃಷ್ಟಿಸಿದೆ ಎಂದು ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೆಗೌಡ ಮಾತನಾಡಿ, ಚಿಕ್ಕಮಗಳೂರು, ಕೊಡಗು, ಹಾಸನ ಒಳಗೊಂಡಂತೆ ರಾಜ್ಯವು ದೇಶದ ಶೇ.80ರಷ್ಟು ಕಾಫಿ ಉತ್ಪಾದನೆ ಮಾಡುತ್ತಿದೆ. ವಿಶ್ವ ಕಾಫಿ ಸಮ್ಮೇಳನದಲ್ಲಿ ನಮ್ಮ ಕಾಫಿಯನ್ನು ವಿಶ್ವಕ್ಕೆ ಪರಿಚಯಿಸಲು ಉತ್ತಮ ಅವಕಾಶವಿದ್ದು, ಇದರ ಸದುಪಯೋಗ ಮಾಡಿಕೊಳ್ಳಲು ಬೆಳೆಗಾರರಿಗೆ ಮನವಿ ಮಾಡಿದರು.