ಮಡಿಕೇರಿ, ಅ. 18: ಕಿರಿಯ ವಯಸ್ಸಿನಲ್ಲಿಯೇ ಆಧುನಿಕ ಜೀವನಶೈಲಿಯೊಂದಿಗೆ ಸ್ವೇಚ್ಛಾಚಾರ, ಆರ್ಥಿಕ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬಿ ಗುಣ ಹೊಂದಿರುವ ಇಂದಿನ ಯುವಜನತೆ ಇಂಥ ಕಿರಿಯ ವಯಸ್ಸಿನಲ್ಲಿಯೇ ಸಾವನ್ನೂ ಕೂಡ ಕಾಣುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ 35 ವರ್ಷದೊಳಗಿನ ಮಹಿಳೆಯರಲ್ಲಿಯೂ ಹೃದಯಾಘಾತ ಕಂಡು ಬರುತ್ತಿರುವದು ಆತಂಕಕಾರಿ ಯಾಗಿದೆ ಎಂದು ಹೃದಯ ತಜ್ಞ, ಬೆಂಗಳೂರಿನ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಭಾರತ ಮನೋವೈದ್ಯರ ಸಂಘದ ವತಿಯಿಂದ ಆಯೋಜಿತವಾಗಿದ್ದ ಮನೋವೈದ್ಯರ ಸಮ್ಮೇಳನದಲ್ಲಿ ಭಾರತದ ಯುವಪೀಳಿಗೆಯ ಒತ್ತಡದ ಜೀವನ ವಿಚಾರಕ್ಕೆ ಸಂಬಂಧಿಸಿ ಅವರು ಉಪನ್ಯಾಸ ನೀಡಿದರು. ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯಿಂದ ಜುಲೈ ತಿಂಗಳಲ್ಲಿ ಕೈಗೊಳ್ಳಲಾದ ಸಮೀಕ್ಷೆ ಪ್ರಕಾರ ಭಾರತದಲ್ಲಿ 35 ವರ್ಷದೊಳಗಿನ ಶೇ.22ರಷ್ಟು ಜನರು ಹೃದ್ರೋಗ ದಿಂದ ಬಳಲುತ್ತಿದ್ದಾರೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ಶೇ.25 ರಷ್ಟು ಏರಿಕೆಯಾಗಿದೆ. 30 ವರ್ಷದೊಳಗಿನ ಯುವಜನಾಂಗದಲ್ಲಿ ಶೇ.51 ರಷ್ಟು ಮಂದಿ ಧೂಮಪಾನ ವ್ಯಸನ, ಶೇ.11 ರಷ್ಟು ಮಂದಿ ಮಧುಮೇಹ, ಶೇ.9 ರಷ್ಟು ಮಂದಿ ಮಾನಸಿಕ ಖಿನ್ನತೆ, ಶೇ.14 ರಷ್ಟು ಮಂದಿ ಕೊಲಸ್ಟ್ರಾಲ್ ನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟವರು ಶೇ. 14, 60-70 ವರ್ಷದವರು ಶೇ.26, 50-60 ವರ್ಷದವರು ಶೇ.35, ಮಧ್ಯವಯಸ್ಕರು ಶೇ.35ರಷ್ಟು ಪ್ರಮಾಣದಲ್ಲಿ ಹೃದಯರೋಗ ಕ್ಕೀಡಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ

(ಮೊದಲ ಪುಟದಿಂದ) ಕಿರಿಯರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೆಚ್ಚುತ್ತಿದೆ. ಯುವ ಭಾರತೀಯರು ನಾನಾ ವ್ಯಸನಗಳಿಗೆ ಸಿಲುಕಿ ಇಂಥ ಕಾಯಿಲೆಗಳ ಸುಳಿಗೆ ಸಿಲುಕುತ್ತಿರುವದು ಕಳವಳಕಾರಿ ಯಾಗಿದೆ ಎಂದು ಹೇಳಿದರು.

ಭಾರತದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಮಹಿಳೆ ಯರೂ ಹೃದ್ರೋಗಿ ಗಳಾಗುತ್ತಿರುವದು ಅಪಾಯಕಾರಿ ಎಂದು ಎಚ್ಚರಿಸಿದರು.ಸಂಸಾರದ ಎಲ್ಲಾ ಕೆಲಸ ಕಾರ್ಯಗಳ ಒತ್ತಡ ದೊಂದಿಗೆ ತಾನೂ ದುಡಿಯುತ್ತಿರುವ ಇಂದಿನ ಆಧುನಿಕ ಮಹಿಳೆಗೆ ಈ ಕಾರಣದಿಂದಲೇ ಒತ್ತಡ ಸಂಬಂಧಿತ ಹೃದ್ರೋಗ ಕಾಣಿಸಿಕೊಳ್ಳುತ್ತಿದೆ. ಮೊದಲೆಲ್ಲಾ 55 ವರ್ಷದ ಮಹಿಳೆಗೆ ಹೃದಯರೋಗ ಕಂಡು ಬರುತ್ತಿದ್ದರೆ ಈಗ 26 ವರ್ಷದ ಮಹಿಳೆಯೂ ಹೃದಯಾಘಾತಕ್ಕೊಳಗಾದ ಪ್ರಕರಣ ಕೂಡ ಕಂಡು ಬರುತ್ತಿರುವದು ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ನುಡಿದರು. ಭಾರತದಲ್ಲಿ ಹೃದ್ರೋಗ ಮೊದಲ ಸ್ಥಾನ ಪಡೆದಿದ್ದು, ಕ್ಯಾನ್ಸರ್ ನಂತರದ ಸ್ಥಾನ ಪಡೆದಿದೆ. ಹಲವಾರು ಮಾದಕ ವಸ್ತುಗಳ ವ್ಯಸನಗಳಿಂದಾಗಿಯೇ ಇಂಥ ರೋಗಗಳು ಹೆಚ್ಚು ಕಂಡುಬರುತ್ತಿದೆ ಎಂದು ಅವರು ಮಾಹಿತಿ ನೀಡಿದರು. ದಕ್ಷಿಣ ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ. ಎ. ಜಗದೀಶ್ ವೇದಿಕೆಯಲ್ಲಿದ್ದರು.