ಮಡಿಕೇರಿ, ಅ. 18: ಶ್ರೀ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ಸಂದರ್ಭದಲ್ಲಿ ಪವಿತ್ರ ತೀರ್ಥೋದ್ಭವದ ಬಳಿಕ ನಾಡಿನೆಲ್ಲೆಡೆ ಕುಲಮಾತೆ ಶ್ರೀ ಕಾವೇರಿಯ ಆರಾಧನೆ ಪ್ರತಿ ಮನೆ ಮನೆಗಳಲ್ಲಿ ನಡೆಯುತ್ತದೆ. ಇದು ಕೊಡಗಿನ ಸಂಪ್ರದಾಯವಾಗಿದ್ದು, ಕಾವೇರಿಯ ಪ್ರತಿರೂಪವನ್ನು ಸೃಷ್ಟಿಸಿ ಅವರವರ ಶಕ್ತ್ಯಾನುಸಾರವಾಗಿ ಹೂವು, ಹಣ್ಣು, ವಿಶೇಷ ಆಭರಣವಾದ ‘ಪತ್ತಾಕ್’ ಸೇರಿದಂತೆ ವಿವಿಧ ಆಭರಣಗಳನ್ನು ಕಾವೇರಿ ಮಾತೆಯ ಪ್ರತಿರೂಪಕ್ಕೆ ತೊಡಿಸಿ ಅದನ್ನು ವಿಶೇಷವಾಗಿ ಶೃಂಗರಿಸಲಾಗುತ್ತದೆ. ತೀರ್ಥದೊಂದಿಗೆ ಮಾತೆಯನ್ನು ಈ ರೀತಿಯಲ್ಲಿ ಪೂಜಿಸುವದು ಪುರಾತನ ಕಾಲದಿಂದ ನಡೆದಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ‘ಕಣಿ ಪೂಜೆ’ ಎಂದು ಕರೆಯಲಾಗುತ್ತದೆ.

ತೀರ್ಥೋದ್ಭವದ ಬಳಿಕ ಸೂರ್ಯೋದಯಕ್ಕೂ ಮುಂಚಿತವಾಗಿ ಈ ಕಾರ್ಯ ನೆರವೇರಿಸಲಾಗುತ್ತದೆ. ಕಾವೇರಿಯ ಪ್ರತಿರೂಪವನ್ನು ಬಿದಿರಿನ ಆಕೃತಿ ಮೂಲಕ ಇಲ್ಲದಿದ್ದಲ್ಲಿ ತೆಂಗಿನಕಾಯಿ, ಸೌತೆಕಾಯಿ ಬಳಸಿ ಕೆಂಪುವಸ್ತ್ರ ಸಹಿತವಾಗಿ ಅಲಂಕರಿಸಲಾಗುತ್ತದೆ. ಇದಾದ ಬಳಿಕ ಪೂಜಿಸಿದ ಈ ಮಾತೆಗೆ ಅಕ್ಕಿ ಹಾಕಿ ನಮಿಸುವದರೊಂದಿಗೆ ಕಿರಿಯರು, ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯುವದು, ಗುರುಕಾರೋಣರ ನೆಲೆ, ಐನ್‍ಮನೆಗಳಿಗೆ ತೆರಳಿ ಪೂರ್ವಿಕರನ್ನು ಸ್ಮರಿಸಿ ನಮಿಸುವದು ಪದ್ಧತಿಯಾಗಿದ್ದು, ತಾ. 18 ರಂದು ಈ ಪರಂಪರೆ ಮಾತೆಯನ್ನು ಕುಲದೇವಿಯಾಗಿ ಆರಾಧಿಸುವವರ ಮನೆಮನೆಗಳಲ್ಲಿ ಜರುಗಿತು.

ಇದು ಒಂದೆಡೆಯಾದರೆ ಕಾವೇರಿಯ ಉಗಮ ಸ್ಥಾನದಿಂದ ವಿವಿಧ ಸಂಘ ಸಂಸ್ಥೆಗಳ ಮೂಲಕ ತೀರ್ಥವನ್ನು ಕೊಂಡೊಯ್ದು ಭಕ್ತಾದಿಗಳಿಗೆ ವಿತರಿಸಲಾಯಿತು. ಕೊಡಗು ಮಾತ್ರವಲ್ಲದೆ, ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಲ್ಲೂ ತೀರ್ಥ ಪೂಜೆಯೊಂದಿಗೆ, ಭಕ್ತರಿಗೆ ತೀರ್ಥವನ್ನು ವಿತರಿಸಲಾಯಿತು.

ಇದರೊಂದಿಗೆ ತೀರ್ಥೋದ್ಭವದ ಮರುದಿನದಂದು ವಿಶೇಷ ಐತಿಹ್ಯ ಹೊಂದಿರುವ ಸ್ಥಳವಾದ ಬಲಮುರಿ (ಬಲಂಬೇರಿ)ಯಲ್ಲಿಯೂ ವಿಶೇಷ ಜಾತ್ರೆ, ಪೂಜಾ ವಿಧಿವಿಧಾನಗಳು ಜರುಗಿತು. ಇಲ್ಲಿಯೂ ಕೇಶಮುಂಡನ, ಪಿಂಡ ಪ್ರಧಾನ, ಅನ್ನದಾನದಂತಹ ಕೈಂಕರ್ಯಗಳಲ್ಲಿ ಭಕ್ತಾದಿಗಳು ಭಾಗಿಗಳಾಗಿದ್ದರು.

ತುಲಾ ಸಂಕ್ರಮಣದ ಬಳಿಕ ಮುಂದಿನ 10 ದಿನಗಳ ಕಾಲ ‘ಪತ್ತಾಲೋದಿ’ ಆಚರಣೆಯೂ ಸೇರಿದಂತೆ ಜಿಲ್ಲೆಯ ಮೂಲನಿವಾಸಿಗಳು ಕಾವೇರಿ ಸಂಕ್ರಮಣದ ಭಕ್ತಿ ಭಾವದೊಂದಿಗೆ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಕೆಲವು ಭಕ್ತಾದಿಗಳ ಮನೆಗಳಲ್ಲಿ ಕಾವೇರಿ ಮಾತೆಯನ್ನು ಆರಾಧಿಸಿದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.