ಜಿಲ್ಲೆಯಲ್ಲಿ ಮುಂದುವರಿದ ಮಳೆ - ‘ಆರೆಂಜ್ ಅಲರ್ಟ್’ ಮಡಿಕೇರಿ, ಅ. 18: ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿದೆ.
ವಾಯುಭಾರ ಕುಸಿತದಿಂದಾಗಿ ಕೇರಳ, ಕರ್ನಾಟಕ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಅಲ್ಲಲ್ಲಿ ತಾ. 19ರ ತನಕ ಹೆಚ್ಚು ಮಳೆಯಾಗುವ ಸಂಭವವಿದೆ. ಸುಮಾರು ಮೂರು ಇಂಚಿನಿಂದ ನಾಲ್ಕು ಇಂಚಿನಷ್ಟು ಮಳೆ ಬೀಳುವ ಸಾಧ್ಯತೆ ಇರುವದರಿಂದ ಕೊಡಗಿನಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆ ಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ. ತುರ್ತು ಸೇವೆಗೆ ಟೋಲ್ ಫ್ರಿ ಸಂಖ್ಯೆ 24x7 ಕಂಟ್ರೋಲ್ (08272 - 221077) ಹಾಗೂ ವ್ಯಾಟ್ಸಾಪ್ ಸಂಖ್ಯೆ 8550001077 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇದೀಗ ಮಳೆಯ ರಭಸ ಇನ್ನಷ್ಟು ಹೆಚ್ಚು ಕಂಡುಬರುತ್ತಿದೆ. ತಲಕಾವೇರಿ ತೀರ್ಥೋದ್ಭವದ ಮರುದಿನವಾದ ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂತಲ್ಲದೆ, ಅಪರಾಹ್ನ 12ರ ವೇಳೆಗೆ ಭಾರೀ ಮಳೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುರಿಯಿತು. ಜಿಲ್ಲೆಯ ಇನ್ನಿತರ ಕಡೆಗಳಲ್ಲಿಯೂ ಮಳೆಗಾಲದ ಸನ್ನಿವೇಶವೇ ಕಂಡುಬರುತ್ತಿದೆ ಎಂದು ವರದಿಯಾಗಿದೆ. ನಿರಂತರ ಮಳೆಯಾಗುತ್ತಿರುವದರಿಂದ ಜಿಲ್ಲೆ ಇನ್ನೂ ಮಳೆಗಾಲದ ಚಿತ್ರಣದಿಂದ ಹೊರಬಂದಂತಿಲ್ಲ ಎನ್ನಬಹುದು.