ಶನಿವಾರಸಂತೆ, ಅ. 18: ಪಟ್ಟಣ ಹಾಗೂ ಹೋಬಳಿಯಾದ್ಯಂತ ಗುರುವಾರ ಮಧ್ಯಾಹ್ನ ಮೂರು ಗಂಟೆಯ ಬಳಿಕ ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು. ಸ್ವಲ್ಪ ಸಮಯ ಬಿಡುವು ನೀಡಿ ಪುನಃ ದಟ್ಟವಾಗಿ ಮೋಡ ಕವಿದು 5.30ರಿಂದ ಜಿನುಗಲಾರಂಭಿಸಿ ನಂತರ ಬಿರುಸು ಪಡೆಯಿತು. ಗುಡುಗು ಸಹಿತ ಜೋರಾಗಿ ಮಳೆ ಸುರಿಯಲಾರಂಭಿಸಿತು.

2 ವಾರಗಳಿಂದ ನಿತ್ಯ ಸುರಿಯುತ್ತಿರುವ ಅಕಾಲಿಕ ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ಈ ವರ್ಷವೂ ಅತಿವೃಷ್ಠಿಯಿಂದಾಗಿ ಬೆಳೆ ಹಾನಿಯ ಚಿಂತೆ ಮೂಡಿದೆ. ಎಲ್ಲೆಡೆ ಗದ್ದೆಯಲ್ಲಿ ಭತ್ತದ ಪೈರು ಸೊಂಪಾಗಿ ಬೆಳೆದಿದೆ. ತೆನೆ ಒಡೆಯುವ ಮೊದಲಾದರೆ ಮಳೆಯಿಂದ ಹಾನಿಯಾಗದು. ಆದರೆ, ತೆನೆ ಒಡೆಯುವ ಸಂದರ್ಭದಲ್ಲಿ ನಿತ್ಯ ಮಳೆಯಾಗುತ್ತಿದ್ದರೆ ಕಾಳು ಜೊಳ್ಳಾಗುವ ಸಂಭವವಿದೆ ಎನ್ನುತ್ತಾರೆ ಕಾಜೂರು ಚಂದ್ರಣ್ಣ ಮತ್ತಿತರ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ರೈತರು.

ಕಾಫಿ ತೋಟಗಳಲ್ಲಿ ಗಿಡದಿಂದ ಹಣ್ಣುಗಳು ಉದುರುತ್ತಿವೆ. ಕಾಳುಮೆಣಸು ಗಿಡದಲ್ಲೇ ಗೊಂಚಲು ಸಹಿತ ಕರಗಿ ಹೋಗಿವೆ. ಇನ್ನೊಂದು ತಿಂಗಳಲ್ಲಿ ಕೊಯ್ಲಿಗೆ ಬರುವ ಭತ್ತ ಕೈಗೆ ಸಿಗುವದೂ ಸಂಶಯವೆ. ಸ್ವಲ್ಪವೂ ಬಿಸಿಲಾಗದೇ ಮಳೆ ನಿತ್ಯ ಹೀಗೆ ಸುರಿದರೆ ರೈತರು ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೃಷಿಕರಾದ ಅಪ್ಪಶೆಟ್ಟಳ್ಳಿ ಗ್ರಾಮದÉ ಎ.ಡಿ. ಮೋಹನ್ ಕುಮಾರ್ ಹಾಗೂ ದೊಡ್ಡಬಿಳಾಹ ಗ್ರಾಮದ ಬಿ.ಪಿ. ಪ್ರಣೀತ್‍ಕುಮಾರ್ ಅಳಲು ತೋಡಿಕೊಂಡರು.