ಗೋಣಿಕೊಪ್ಪಲು, ಅ. 18: ದೂರದ ಊರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಷ್ಟವನ್ನು ಅರಿತ ಶಿಕ್ಷಣ ಪ್ರೇಮಿ ಚಕ್ಕೇರ ಮುತ್ತಣ್ಣ ದೂರ ಕಲ್ಪನೆಯ ಆಲೋಚನೆಯಿಂದಾಗಿ ಗೋಣಿಕೊಪ್ಪ ನಗರದಲ್ಲಿ 50 ವರ್ಷಗಳ ಹಿಂದೆ ಆರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಈ ಮರದ ನೆರಳಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲೇ ಇರುವ ಕಾವೇರಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಮೂಲಕ ಸಾರ್ಥಕತೆ ಪಡೆದಿದ್ದಾರೆ.

ಕಾವೇರಿ ಎಜುಕೇಷನ್ ಸೊಸೈಟಿಯ ಮೂಲಕ 1968ರಲ್ಲಿ ದಕ್ಷಿಣ ಕೊಡಗಿನ ಇತಿಹಾಸದಲ್ಲಿ ಸುವರ್ಣ ಸಂವತ್ಸರ, ಶಿಕ್ಷಣ ಪ್ರೇಮಿ, ದೂರದೃಷ್ಟಿಯ ಹÀರಿಕಾರ ಚೆಕ್ಕೇರ ಬಿ. ಮುತ್ತಣ್ಣ ಅವರ ಉನ್ನತ ವಿದ್ಯಾಭ್ಯಾಸದ ಕನಸು ನನಸಾದ ವರ್ಷ. 60ರ ದಶಕಕ್ಕಾಗಲೇ ಅಲ್ಲೊಂದು ಇಲ್ಲೊಂದು ಎದ್ದು ನಿಂತಿದ್ದ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದ ಕೊಡಗಿನ ವಿದ್ಯಾವಂತ ಯುವ ಸಮುದಾಯ ಮೈತುಂಬ, ಮನಸ್ಸು ತುಂಬ ಪದವಿ ಶಿಕ್ಷಣದ ಕನಸು, ಆಸೆ ಹೊತ್ತಿದ್ದರೂ ನಿರಾಸೆಯಿಂದ ಮುದುಡುತ್ತಿದ್ದ ಸಮಯ. ಇಂತಹ ಸಂದರ್ಭದಲ್ಲಿ ಚೆಕ್ಕೆರ ಬಿ. ಮುತ್ತಣ್ಣನವರು ಗ್ರಾಮೀಣ ಮಕ್ಕಳಿಗೆ ಮೈಸೂರು, ಮಂಗಳೂರು, ಬೆಂಗಳೂರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರದ ಪಟ್ಟಣಗಳಿಗೆ ತಲಪಲು ಅಸಾಧ್ಯವೆಂದು, ಮನೆಯಂಗಳದಲ್ಲೇ ಕಾವೇರಿ ಎಜುಕೇಷನ್ ಸೊಸೈಟಿಯ ಮೂಲಕ ಉನ್ನತ ಶಿಕ್ಷಣ ಸಸಿಯನ್ನು ನೆಟ್ಟು ಬೆಳೆಸಿದರು.ಇಂತಹ ಸಂಸ್ಥೆಗೆ ಇದೇ ಮೊದಲ ಬಾರಿ ಆಡಳಿತ ಮಂಡಳಿಗೆ ಬಹಿರಂಗ ಚುನಾವಣೆ ನಡೆಯುವ ಮೂಲಕ 6 ಮಂದಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ ವಿದ್ಯಾಸಂಸ್ಥೆಗೆ ನಡೆದ ಚುನಾವಣೆಯಲ್ಲಿ 6 ನಿರ್ದೇಶಕರ ಸ್ಥಾನಕ್ಕೆ 13 ಸ್ಪರ್ಧಿಸಿದ್ದು, ಚುನಾವಣೆ ತೀವ್ರ ಹಣಾಹಣಿಯಿಂದ ಕೂಡಿತ್ತು. ಗ್ರಾಮಾಂತರ ಪ್ರದೇಶದಲ್ಲಿದ್ದ ಸಂಸ್ಥೆಯ ಸದಸ್ಯರ ಬಳಿ ತೆರಳಿ ಮತಯಾಚನೆ ನಡೆಸಿದ್ದರು. ಅಂತಿಮವಾಗಿ ನೂತನ ನಿರ್ದೇಶಕರಾಗಿ 6 ಮಂದಿ ಆಯ್ಕೆಯಾದರು.

ನೂತನ ನಿರ್ದೇಶಕರು : ಬುಟ್ಟಿಯಂಡ ಚಂಗಪ್ಪ,ಚೆಪ್ಪುಡೀರ ಎಂ.ಕಿರಣ್, ಚಿರಿಯಪಂಡ ಕೆ.ಉತ್ತಪ್ಪ, ಕುಪ್ಪಂಡ ಎಂ.ಬೆಳ್ಳಿಯಪ್ಪ,ಮೂಕಳಮಾಡ ಕೆ.ಮೊಣ್ಣಪ್ಪ ಹಾಗೂ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ನೂತನ ನಿರ್ದೇಶಕರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡಿದ್ದಾರೆ.

ಸೋಲು ಅನುಭವಿಸಿದವರು : ಚೊಟ್ಟೆಯಂಡಮಾಡ ವಿಶ್ವನಾಥ್, ಡಾ. ಜಮ್ಮಡ ಎಂ. ಪೊನ್ನಮ್ಮ, ಮಚ್ಚಮಾಡ ಅನೀಶ್ ಮಾದಪ್ಪ, ಮುಲ್ಲೇಂಗಡ ಮಧೋಶ್ ಪೂವಯ್ಯ, ಪಳಂಗಡ ವಾಣಿ ಚಂಗಪ್ಪ, ತಿರುನೆಲ್ಲಿಮಾಡ ಎಂ. ದೇವಯ್ಯ, ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದಾರೆ.

ಸಂಸ್ಥೆಯ ಪಿತಾಮಹ ಎನಿಸಿಕೊಂಡ ಮುತ್ತಣ್ಣ ಅವರ ಸಾರಥ್ಯದ ರಥಕ್ಕೆ ಎ.ಎನ್. ಸೋಮಯ್ಯ, ಕೆ.ಸಿ. ಮಂದಣ್ಣ, ಎ.ಕೆ. ನಾಚಪ್ಪರಂತಹ ಮಹಾನುಭಾವರು ಗಾಲಿಗಳಾಗಿದ್ದರು. ಇವರು ಹಚ್ಚಿದ ಹಣತೆಯನ್ನು ಆನಂತರದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳು ನಿಸ್ವಾರ್ಥತೆಯಿಂದ ದೀಪದಿಂದ ದೀಪವನ್ನು ಹಚ್ಚುವಂತೆ ಕೇವಲ 71 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕಾಲೇಜು 2449 ವಿದ್ಯಾರ್ಥಿಗಳು ಮತ್ತು 218 ಉದ್ಯೋಗಿಗಳಿಗೆ ವಿಸ್ತಾರಗೊಂಡಿದೆ. ಜನ ಮಾನಸದಲ್ಲಿ ವಿಶ್ವಾಸದ ಸಾಗರವನ್ನೇ ತುಂಬಿದ್ದಾರೆ. ಇಂದು ಕಾವೇರಿ ಕಾಲೇಜು ಗೋಣಿಕೊಪ್ಪಲು, ಕಾವೇರಿ ಪದವಿಪೂರ್ವ ಕಾಲೇಜು ಗೋಣಿಕೊಪ್ಪಲು, ಕಾವೇರಿ ಕಾಲೇಜು ವೀರಾಜಪೇಟೆ, ಕಾವೇರಿ ಪದವಿ ಪೂರ್ವ ಕಾಲೇಜು ವೀರಾಜಪೇಟೆ ಹಾಗೂ ಕಾವೇರಿ ಪಾಲಿಟೆಕ್ನಿಕ್, ಕಾವೇರಿ ಸ್ನಾತಕೋತ್ತರ ಕಾಲೇಜಿನ ಮೂಲಕ ದಾಪುಗಾಲಿಡುತ್ತಾ ಶಿಕ್ಷಣದ ಹಾದಿಯಲ್ಲಿ ದಿಟ್ಟ ಹೆಜ್ಜೆಗಳನ್ನು ಮೂಡಿಸಿ ಮುನ್ನುಗ್ಗುತ್ತಿರುವ ಕಾವೇರಿ ಎಜುಕೇಷನ್ ಸೊಸೈಟಿ ನಾಡಿನ ಶಿಕ್ಷಣ ಕ್ಷೇತ್ರಕ್ಕೊಂದು ಚಿನ್ನದ ಗರಿಯಾಗಿದೆ.

ಸಂಸ್ಥೆಯ ಸಾರ್ಥಕತೆಯ ಸಮುದ್ರಕ್ಕೆ ಹನಿಗೂಡಿಸಿದವರು ನೂರಾರು, ಸಾವಿರಾರು ಜನ ಸುಶಿಕ್ಷಿತ ಹೊಸ ತಲೆಮಾರಿನ ಮುನ್ನೋಟವಿದ್ದ ಕೊಡುಗೈ ದಾನಿಗಳು ತನು-ಮನ-ಧನವನ್ನರ್ಪಿಸಿ ನಿಸ್ವಾರ್ಥ ಸೇವೆಗೈದು, ಸೇವೆಗೈಯುತ್ತಿರುವ ಆಡಳಿತ ಮಂಡಳಿ, ಬೋಧಕ-ಬೊಧಕೇತರ ಸಿಬ್ಬಂದಿ ವರ್ಗ, ಹಳೆ-ಹೊಸ ವಿದ್ಯಾರ್ಥಿಗಳು, ಪೋಷಕರು, ಕಾವೇರಿಯ ಆಲಕ್ಕೆ ರೆಂಬೆ-ಕೊಂಬೆಗಳು.

1968ರಲ್ಲಿ ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜು, 1969ರಲ್ಲಿ ಕಾವೇರಿ ಪದವಿ ಕಾಲೇಜು, ಗೋಣಿಕೊಪ್ಪಲು, 1980ರಲ್ಲಿ ಆರಂಭವಾದ ವೀರಾಜಪೇಟೆ ಮಹಿಳಾ ಕಾಲೇಜು, 1986ರಲ್ಲಿ ಆರಂಭವಾದ ಕಾವೇರಿ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಗಳು ಕಾವೇರಿ ಎಜುಕೇಷನ್ ಸೊಸೈಟಿಯ ಯಶೋಗಾಥೆsÉಗೆ ಹಿಡಿದ ಕೈಗನ್ನಡಿಗಳಾಗಿವೆ.

- ಹೆಚ್.ಕೆ. ಜಗದೀಶ್