ಭಾಗಮಂಡಲ, ಅ. 16: ಶ್ರೀ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ತಲಕಾವೇರಿಯಲ್ಲಿ ಪೂಜಾ ವಿಧಿವಿಧಾನಗಳಿಗೆ ನೂತನ ಕೊಡುಗೆಯೊಂದು ನೀಡಲ್ಪಟ್ಟಿದೆ. ಕುಶಾಲನಗರದ ಜ್ಞಾನಗಂಗಾ ಫೌಂಡೇಶನ್ ಟ್ರಸ್ಟ್‍ನಿಂದ ಸಂಕಲ್ಪ ಮಂಟಪವೊಂದು ಅರ್ಪಣೆಗೊಂಡಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ಕ್ಷೇತ್ರದ ಪರವಾಗಿ ಇದನ್ನು ಸ್ವೀಕರಿಸಿದರು. ಸುಮಾರು ರೂ. 2.50 ಲಕ್ಷ ವೆಚ್ಚದಲ್ಲಿ ಈ ಮಂಟಪವನ್ನು ರಚಿಸಲಾಗಿದೆ.ಇಂದು ಕ್ಷೇತ್ರಕ್ಕೆ ಡಿವೈಎಸ್‍ಪಿ ದಿನೇಶ್‍ಕುಮಾರ್ ಆಗಮಿಸಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ತೀರ್ಥೋದ್ಭವ ಸ್ಥಳದ ಸುತ್ತ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಪ್ರಸಕ್ತ ವರ್ಷ ಮಂಡ್ಯದ ಅನ್ನಸಂತರ್ಪಣಾ ಸಮಿತಿಯಿಂದ ಜಾತ್ರೆ ದಿನ ಅನ್ನದಾನವನ್ನು ಪುನರಾರಂಭಿಸಲಾಗಿದೆ. ಕಳಗಪ್ಪನ್ ಚೆಟ್ಟಿಯಾರ್ ಟ್ರಸ್ಟ್‍ನಿಂದ ಆಶ್ರಮ ಮುಂಭಾಗ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿವರ್ಷದಂತೆ ಕೊಡಗು ಏಕೀಕರಣ ರಂಗದ ಮೂಲಕ ಜಾತ್ರೆದಿನದಿಂದ ಆರಂಭಗೊಂಡು ಕಿರು ತುಲಾ ಸಂಕ್ರಮಣದವರೆಗೆ ನಿರಂತರ ಅನ್ನಸಂತರ್ಪಣೆ ಜರುಗಲಿದೆ.(ಮೊದಲ ಪುಟದಿಂದ) ಈ ನಡುವೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುಗಮ ಕೆಲಸಕ್ಕೆ ಅಡಚಣೆಯುಂಟಾಗಿದೆ. ಜಾತ್ರೆಯ ದಿನವೂ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶವಿಲ್ಲದಿರುವದು ಕೆಲವರಲ್ಲಿ ಅಸಮಾಧಾನ ಮೂಡಿಸಿದೆ. ಇಂದು ಪೂರ್ವಭಾವಿಯಾಗಿ ನಡೆದ ಪೂಜಾದಿಗಳಲ್ಲಿ ಅರ್ಚಕ ನಾರಾಯಣಾಚಾರ್, ಶಾಸಕ ಬೋಪಯ್ಯ, ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಸದಸ್ಯರುಗಳಾದ ಮೀನಾಕ್ಷಿ, ರಮೇಶ್, ಅಣ್ಣಯ್ಯ, ಮೋಟಯ್ಯ, ಕಾವೇರಪ್ಪ, ಸುಭಾಶ್ ಮೊದಲಾದವರು ಹಾಜರಿದ್ದರು.

ತಲಕಾವೇರಿಗೆ ತರಲ್ಪಟ್ಟ ಕಾವೇರಿ ಮಾತೆಯ ಆಭರಣ

ಕಾವೇರಿ ಜಾತ್ರೆಯ ಹಿನ್ನೆಲೆಯಲ್ಲಿ ತೀರ್ಥೋದ್ಭವದ ದಿನ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣ ಗಳನ್ನು ಭಾಗಮಂಡಲ ದೇವಾಲಯದಿಂದ ಇಂದು ಕೊಂಡೊಯ್ಯಲಾಯಿತು. ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಕಾರ್ಯನಿರ್ವಹಣಾಧಿಕಾರಿ ಜಗದೀಶ್‍ಕುಮಾರ್ ಅವರಿಂದ ತಕ್ಕರಾದ ಕೋಡಿ ಮೋಟಯ್ಯ ಅವರು ಮಾತೆಗೆ ತೊಡಿಸುವ ಚಿನ್ನಾಭರಣಗಳನ್ನು ಪಡೆದುಕೊಂಡ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ನಾದಸ್ವರದೊಂದಿಗೆ ಮೆರವಣಿಗೆ ಮೂಲಕ ಭಾಗಮಂಡಲದ ಮಾರುಕಟ್ಟೆವರೆಗೆ ತೆರಳಿ ನಂತರ ವಾಹನದ ಮೂಲಕ ತಲಕಾವೇರಿಗೆ ಕೊಂಡೊಯ್ಯ ಲಾಯಿತು. ತಾ.17ರಂದು (ಇಂದು) ಬೆಳಿಗ್ಗೆ ಕಾವೇರಿ ಮಾತೆಗೆ ಚಿನ್ನಾಭರಣ ತೊಡಿಸಲಾಗುವದು. ಒಂದು ತಿಂಗಳ ಕಾಲ ಚಿನ್ನಾಭರಣವನ್ನು ತೊಡಿಸಿದ ಬಳಿಕ ತಕ್ಕರು ಆಡಳಿತಾಧಿಕಾರಿ ಯವರಿಗೆ ಹಿಂತಿರುಗಿಸುವರು.ಈ ಸಂದರ್ಭ ಭಾಗಮಂಡಲ- ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಮೀನಾಕ್ಷಿ, ರಮೇಶ್, ಕೋಡಿ ಚಂದ್ರಶೇಖರ್, ರವಿಹೆಬ್ಬಾರ್, ಡಿವೈಎಸ್ಪಿ ದಿನೇಶ್‍ಕುಮಾರ್, ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಕುದುಪಜೆ ಪ್ರಕಾಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

-ಸುನಿಲ್