ಸುಂಟಿಕೊಪ್ಪ, ಅ. 15: ಕಳೆದ 1 ವಾರದಿಂದ ಪ್ರತಿ ದಿನ ರಾತ್ರಿ ಬೆಳಿಗ್ಗೆ ಸುರಿಯುತ್ತಿರುವ ಮಳೆಯಿಂದ ಸುಂಟಿಕೊಪ್ಪ ಹೋಬಳಿ ಕೃಷಿಕರ, ಕಾರ್ಮಿಕರ, ವರ್ತಕರ ಬದುಕು ಮೂರಾಬಟ್ಟೆಯಾಗಿದೆ.

ರಾತ್ರಿವೇಳೆ ಗುಡುಗು ಸಿಡಿಲಿನೊಂದಿಗೆ ಮಳೆಯು ಆರ್ಭಟಿಸುತ್ತಿದ್ದು, ಜನಸಾಮಾನ್ಯರು ನಿದ್ದೆಗಣ್ಣಿನಿಂದ ಮುಂಜಾನೆ ಹಾಸಿಗೆಯಿಂದ ಏಳುವಾಗಲೂ ವರುಣನ ಅಬ್ಬರದಿಂದ ತತ್ತರಿಸುತ್ತಿದ್ದಾರೆ. ಪ್ರತಿದಿನ 1 ಇಂಚಿನಿಂದ 3 ಇಂಚುಗಳವರೆಗೆ ಮಳೆಯಿಂದ ಅರೇಬಿಕಾ ಕಾಫಿ ನೆಲಕಚ್ಚುತ್ತಿದೆ. ಅಲ್ಪ ಸ್ವಲ್ಪ ಕಾಫಿ ಕೊಯ್ಲು ಮಾಡಿದ್ದರೂ ಒಣಗಿಸಲು ಹರಸಾಹಸ ಪಡುವ ಬೆಳೆಗಾರರಿಗೆ ಕರಿಮೆಣಸು ಕೊತ್ತು ಕೈಕೊಡುವ ಅತಂಕ ಶುರುವಾಗಿದೆ.

ಕಾಫಿ ತೋಟದಲ್ಲಿ ಮಳೆಯ ಕಾರಣ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ. ವರ್ತಕರು ವ್ಯಾಪಾರವಿಲ್ಲದೆ ಹೈರಾಣಾಗಿದ್ದಾರೆ.ಆಟೋ ರಿಕ್ಷಾ, ಬಾಡಿಗೆ ವಾಹನ ಮಾಲೀಕರಿಗೂ ಮಳೆಯ ಬಿಸಿ ತಟ್ಟಿದೆ.

ಕೃಷಿ ಮಾಡಿದ ಭತ್ತದ ಪೈರಿಗೆ ಒಂದೆಡೆ ಹುಳ ಬಾಧೆಯಿಂದ ಪೈರಿನ ಆರೋಗ್ಯಕರ ಬೆಳವಣಿಗೆಗೆ ಹಿನ್ನೆಡೆಯಾಗಿದೆ. ಕಾಫಿ ತೋಟಕ್ಕೆ ಗೊಬ್ಬರ ಹಾಕಿದ ಬೆಳೆಗಾರರು ಆಕಾಲಿಕ ಮಳೆಯಿಂದ ಕುಸಿದು ಹೋಗಿದ್ದಾರೆ. ಮಳೆಯಿಂದ ತೋಟದಲ್ಲಿ ಕಾಡು ಬೆಳೆಯುತ್ತಿದೆ. ಫಸಲು ಉದುರುತ್ತಿದೆ. ಕರಿಮೆಣಸು ಕೈಕೊಡಲಿದೆ. ಬ್ಯಾಂಕಿನ ಸಾಲ ಹೇಗೆ ತೀರಿಸುವದು ಎಂದು ತಲೆಮೇಲೆ ಕೈ ಹೊತ್ತು ಮಮ್ಮಲ ಮರುಗುವ ಸ್ಥಿತಿ ಬಂದಿದೆ.

ಅಕ್ಟೋಬರ್‍ನಲ್ಲಿ ಬರುತ್ತಿರುವ ಅಕಾಲಿಕ ಮಳೆಯಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. -ರಾಜುರೈ ಬಿ.ಡಿ.