ಮಡಿಕೇರಿ, ಅ. 15: ಮಡಿಕೇರಿಯ ಪಂಪಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಅವರ ಮೃತದೇಹ ಇಂದು ಪತ್ತೆಯಾಗಿದೆ.
ನಗರದ ಮುತ್ತಪ್ಪ ದೇವಾಲಯ ಸಮೀಪದಲ್ಲಿ ವಾಸವಿದ್ದ ಪ್ರದೀಪ್, ದಸರಾ ಜನೋತ್ಸವದ ಸಂದರ್ಭದಲ್ಲಿ ದಂಡಿನ ಮಾರಿಯಮ್ಮ ದೇವಾಲಯದ ಮಂಟಪ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದರು. ಸೋಮವಾರದಂದು ಸಂಜೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು ಕೆರೆಯ ಬದಿಯಲ್ಲಿದ್ದ ಚಪ್ಪಲಿ, ಲೈಟರ್, ಮೊಬೈಲ್ ಹಾಗೂ ಡೆತ್ ನೋಟ್ ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನನ್ನ ಸಾವಿನ ನಂತರ ನನ್ನ ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ಬದಲು ಮೆಡಿಕಲ್ ಕಾಲೇಜಿಗೆ ನೀಡಿ ಎಂದು ಮರಣ ಪತ್ರದಲ್ಲಿ ಬರೆಯಲಾಗಿತ್ತಾದರೂ ಕುಟುಂಬಸ್ಥರು ಒಪ್ಪದ ಕಾರಣ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಅಗ್ನಿಶಾಮಕ ದಳದವರು ತೀವ್ರ ಶೋಧ ನಡೆಸಿದರಾದರೂ ಮೃತದೇಹ ಕಂಡುಬಂದಿಲ್ಲವಾದ್ದರಿಂದ ಮುಳುಗುತಜ್ಞರನ್ನು ಕರೆಸಲಾಯಿತು. ಆದರೆ ಅವರು ಬರುವ ವೇಳೆಗೆ ಮೃತದೇಹವನ್ನು ಮತ್ತೆ ಅಗ್ನಿಶಾಮಕ ದಳದವರೇ ಪತ್ತೆ ಹಚ್ಚಿದ್ದರು. ಶೋಧ ಕಾರ್ಯ ಸಂದರ್ಭ ನೂರಾರು ಸಂಖ್ಯೆಯಲ್ಲಿ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.