ಸಿದ್ದಾಪುರ, ಅ. 15: ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಗ್ರಾ.ಪಂ ಕರೆದ ಪೂರ್ವ ಭಾವಿ ಸಭೆಯಲ್ಲಿ ಗ್ರಾಮಸ್ಥರ ಅನುಪಸ್ಥಿತಿ ಕಂಡುಬಂತು.

ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಬಗೆಹರಿಯದ ಕಸ ವಿಲೇವಾರಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಸ್ಥಳೀಯ ಪಂಚಾಯಿತಿ ಹರಸಾಹಸ ಪಡುತ್ತಿದ್ದು , ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಕಸ ಮುಕ್ತ ಗ್ರಾಮ ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಲು ಕರೆ ನೀಡಿತ್ತು. ಸಭೆಗಳಿಗೆ ಆಗಮಿಸಲು ಗ್ರಾಮಸ್ಥರಿಗೆ ಮುಕ್ತವಾಗಿ ಆಹ್ವಾನ ನೀಡಿದ್ದರೂ ಕೂಡ ಹೊಟೇಲ್, ಅಂಗಡಿ ವ್ಯಾಪಾರಿಗಳು, ಮಾಂಸ ವ್ಯಾಪಾರಿಗಳು ಪ್ರತಿ ಬಾರಿ ಕೂಡ ಸಭೆಗೆ ಹಾಜರಾಗದಿರುವದು ಪಂಚಾಯಿತಿಯ ತೀರ್ಮಾನಗಳನ್ನು ಬುಡಮೇಲಾಗಿಸಿದೆ.

ವ್ಯಾಪಾರಿಗಳಿಲ್ಲದೆ ಪ್ಲಾಸ್ಟಿಕ್ ಮಾರಾಟ ನಿಷೇಧಿಸುವ ಕುರಿತು ನಡೆಸಿದ ಸಭೆಯಲ್ಲಿ ಮೊದಲಿಗೆ ಗ್ರಾಮದ ದಿನಸಿ, ಮಾಂಸ ಹಾಗೂ ಮೀನು ವ್ಯಾಪಾರಿಗಳ ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಹಾಕಲು ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಗ್ರಾಮದ ಪ್ರಮುಖ ವಾರ್ಡ್‍ಗಳಲ್ಲಿ ಸಮಿತಿಗಳನ್ನು ರಚಿಸಿ ಕಸ ವಿಭಜನೆಗೆ ಮುಂದಾಗುವ ಕುರಿತು ಚರ್ಚಿಸಲಾಯಿತು.

ಈ ಸಂದÀರ್ಭ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ಪಿಡಿಒ ಅನಿಲ್‍ಕುಮಾರ್, ಗ್ರಾ.ಪಂ. ಸದಸ್ಯರುಗಳು ಹಾಗೂ ಗ್ರಾಮದ ಪ್ರಮುಖರಾದ ಭರತ್, ಶೌಕತ್, ದೇವಸಿ, ಗಣೇಶ್, ರದೀಶ್ ಮತ್ತಿತರರು ಹಾಜರಿದ್ದರು. ಸಭೆಯ ನಂತರ ಪಿಡಿಒ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರು ಹಾಗೂ ಪ್ರಮುಖರನ್ನೊಳಗೊಂಡ ತಂಡವು ಅಂಗಡಿಗಳಿಗೆ ತೆರಳಿ ಪರಿಶೀಲಿಸಿ ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡಿದರೆ ದಂಡವನ್ನು ವಿಧಿಸುವದಾಗಿ ಎಚ್ಚರಿಕೆ ನೀಡಿತು.