ಸೋಮವಾರಪೇಟೆ, ಅ. 15: ನದಿಪಾತ್ರದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲು ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪರಾಜೇಶ್ ಅಧ್ಯಕ್ಷತೆಯಲ್ಲಿ, ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಜಿಲ್ಲೆಯ ನದಿ ದಂಡೆಗಳನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ಕೊಂಡವರನ್ನು ಕಾನೂನು ಪ್ರಕಾರ ತೆರವುಗೊಳಿಸಿದರೆ, ಪ್ರತಿ ವರ್ಷ ಮಳೆಹಾನಿ ಪರಿಹಾರ ನೀಡುವದನ್ನು ತಡೆಯಬಹುದು ಎಂದು ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಸದಸ್ಯರಾದ ವಿಜು ಚಂಗಪ್ಪ ಸಲಹೆ ನೀಡಿದರು.
ನದಿ ದಂಡೆ ಒತ್ತುವರಿ ಹಾಗೂ ತೆರವು ಕಾರ್ಯದ ಬಗ್ಗೆ ಸದಸ್ಯರು ತಹಸೀಲ್ದಾರ್ ಗೋವಿಂದರಾಜ್ ಅವರೊಂದಿಗೆ ಚರ್ಚಿಸಿದರು.
ನದಿ ಪಾತ್ರದಲ್ಲಿರುವ ಮನೆಯನ್ನು ತೆರವುಗೊಳಿಸಬೇಕು. ನೈಜ ಸಂತ್ರಸ್ತರಿಗೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಈ ಕ್ರಮದಿಂದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹು ದೆಂದು ಸದಸ್ಯರಾದ ವಿಜು ಚಂಗಪ್ಪ ಸಲಹೆ ನೀಡಿದರು. ಗ್ರಾ.ಪಂ. ವ್ಯಾಪ್ತಿಯ ಪಂಚಾಯಿತಿ ಪಿ.ಡಿ.ಓ. ಹಾಗೂ ಕಂದಾಯ ಅಧಿಕಾರಿಗಳಿಂದ ಸರ್ವೆ ಮಾಡಿಸಿ, ಮಾಹಿತಿ ಪಡೆದುಕೊಂಡು, ತೆರವು ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವದು ಎಂದು ತಹಶೀಲ್ದಾರ್ ಸಭೆಗೆ ಭರವಸೆ ನೀಡಿದರು.
ನೆಲ್ಲಿಹುದಿಕೇರಿ ನದಿ ಪ್ರವಾಹ ಸಂತ್ರಸ್ತರ ಕೇಂದ್ರದಲ್ಲಿ 150 ಮಂದಿ ಆಶ್ರಯ ಪಡೆದಿದ್ದು, 52 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು, ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ತೆರವು ಕಾರ್ಯಕ್ಕೆ ವ್ಯಕ್ತಿಯೊಬ್ಬರು ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿರುವದರಿಂದ ವಿಳಂಬವಾಗುತ್ತಿದೆ ಎಂದು ಉಪಾಧ್ಯಕ್ಷರ ಪ್ರಶ್ನೆಗೆ ತಹಶೀಲ್ದಾರ್ ಗೋವಿಂದರಾಜು ಉತ್ತರಿಸಿದರು.
ತಾಲೂಕಿನಲ್ಲಿ 94ಸಿ ಯಲ್ಲಿ ಒಟ್ಟು 22,790 ಅರ್ಜಿಗಳು ಸಲ್ಲಿಕೆಯಾಗಿದ್ದು, 1754 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಕೆಲವು ಪ್ರಕರಣದಲ್ಲಿ ಗಂಡ ಹೆಂಡತಿ ಇಬ್ಬರೂ ಅರ್ಜಿ ಸಲ್ಲಿಸಿದ್ದು, ಹಕ್ಕುಪತ್ರಕ್ಕಾಗಿ ರಾಜಕೀಯ ಪ್ರಭಾವ ಬಳಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೆ 5160 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹಕ್ಕುಪತ್ರ ಪಡೆಯಲು ಫಲಾನುಭವಿ ಗಳು ಶುಲ್ಕ ಪಾವತಿಸಬೇಕಾಗಿದ್ದು, ನಿಗದಿತ ಶುಲ್ಕ ಪಾವತಿಸಿ ಹಕ್ಕುಪತ್ರ ಪಡೆಯುವಂತೆ ತಹಶೀಲ್ದಾರ್ ಹೇಳಿದರು. ಸಿ ಮತ್ತು ಡಿ ಜಾಗಕ್ಕೂ ಹಕ್ಕುಪತ್ರ ನೀಡಲು ಸರ್ಕಾರದ ಆದೇಶವಿದ್ದು, 1984 ಅರ್ಜಿಗಳು ಸಲ್ಲಿಕೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದರು.
ಕೆಲವರಿಗೆ ವೃದ್ಧಾಪ್ಯ ವೇತನ, ವಿಧವಾವೇತನಗಳು ಬರುತ್ತಿಲ್ಲ. ಇದರಿಂದ ವೃದ್ಧರು ಆತಂಕಕ್ಕೆ ಒಳಗಾಗಿದ್ದಾರೆ. ವೃದ್ಧರಿಗೆ ಅರ್ಥ ವಾಗುವ ರೀತಿಯಲ್ಲಿ ಯಾರೂ ತಿಳಿ ಹೇಳುತ್ತಿಲ್ಲ. ಅನೇಕರು ಬ್ಯಾಂಕು, ಅಂಚೆ ಕಚೇರಿ, ಖಜಾನೆ ಹತ್ತಿರ ಬಂದು ಕುಳಿತುಕೊಳ್ಳುತ್ತಿದ್ದಾರೆ ಎಂದು ಸದಸ್ಯರಾದ ಬಿ.ಬಿ.ಸತೀಶ್, ಸಬಿತಾ ಚನ್ನಕೇಶವ, ಕುಶಾಲಪ್ಪ, ಕುಸುಮ ಅಶ್ವಥ್, ಬಿ.ಕೆ.ಸುಹಾದ ಅವರು ತಹಶೀಲ್ದಾರರ ಗಮನಕ್ಕೆ ತಂದರು.
ಸರ್ಕಾರದ ಮಟ್ಟದಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ತಹಶೀಲ್ದಾರರು ಹೇಳಿದರು.
ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಕಾರಣಕ್ಕೆ, ನನ್ನ ವಿರುದ್ಧ ಜಾತಿನಿಂದನೆಯ ಆರೋಪದಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆ ವೈದ್ಯರ ವಿರುದ್ಧ ಸಭೆ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸಭೆಗೆ ಮನವಿ ಮಾಡಿದರು. ಖಂಡನಾ ನಿರ್ಣಯಕ್ಕೆ ಸಭೆ ಒಪ್ಪಿಗೆ ನೀಡಿತು.
ಕುಶಾಲನಗರ ರಂಗಸಮುದ್ರ ಸಮೀಪದ ಮಹಿಳೆಯೋರ್ವರು 7 ಆನೆಗಳನ್ನು ಸಾಕುತ್ತಿದ್ದು, ಈ ಸಾಕಾನೆಗಳು ಸುತ್ತಮುತ್ತಲಿನ ಗ್ರಾಮಗಳ ರೈತರ ಕೃಷಿ ಫಸಲನ್ನು ಹಾನಿಗೊಳಿಸುತ್ತಿವೆ ಎಂದು ಸದಸ್ಯ ವಿಜು ಚಂಗಪ್ಪ ದೂರಿದರು.
2 ಆನೆಗಳನ್ನು ಸಾಕಲು ಅರಣ್ಯ ಇಲಾಖೆಯಿಂದ ಅನುಮತಿ ಇದೆ. ಅವುಗಳು ಮರಿ ಹಾಕಿವೆ ಎಂದು ಅವರು ಹೇಳುತ್ತಿದ್ದಾರೆ. ಸಾಕಾನೆಗಳು ಬೆಳೆ ನಷ್ಟ ಮಾಡುತ್ತಿರುವ ಬಗ್ಗೆ ಮಾಹಿತಿ ತರಿಸಿಕೊಂಡಿದ್ದು, ಮಾಲೀಕರಿಗೆ ನೋಟೀಸ್ ಜಾರಿಗೊಳಿ ಸಲಾಗುವದು. ಸಾಕಾನೆಗಳ ವಶಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವದು ಎಂದು ಕುಶಾಲನಗರ ಆರ್.ಎಫ್.ಓ. ಹೇಳಿದರು. ಗೋಣಿಮರೂರು, ಗಣಗೂರು ರಸ್ತೆ ಹೊಂಡಮಯ ವಾಗಿರುವ ಬಗ್ಗೆ ಸದಸ್ಯರಾದ ಸವಿತ ಅಸಮಾಧಾನ ವ್ಯಕ್ತಪಡಿಸಿದರು. ಹಾನಗಲ್, ಯಡೂರು ಸಂಪರ್ಕ ರಸ್ತೆಗೆ ರೂ. 70 ಲಕ್ಷ ಅನುದಾನ ಏನಾಯಿತು ಎಂದು ಸದಸ್ಯರಾದ ತಂಗಮ್ಮ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರನ್ನು ಪ್ರಶ್ನಿಸಿದರು. ಹಿಂದಿನ ಸರ್ಕಾರದಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಕಾಮಗಾರಿ ಪ್ರಾರಂಭಿಸದಂತೆ ಸರ್ಕಾರದಿಂದ ಸೂಚನೆ ಇದೆ ಎಂದು ಅಧಿಕಾರಿ ಹೇಳಿದರು. ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖಾಧಿಕಾರಿ ಗಳು ಉಪಸ್ಥಿತರಿದ್ದರು.