ಶನಿವಾರಸಂತೆ, ಅ. 15: ಶನಿವಾರಸಂತೆ 1ನೇ ವಿಭಾಗದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಗ್ರಂಥಾಲಯಕ್ಕೆ ಹಾಗೂ ಗೇಟಿಗೆ ಬೀಗ ಜಡಿಯಲಾಗಿದೆ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಶನಿವಾರಸಂತೆಯ ನಾಡ ಕಚೇರಿಗೆ ಸೇರಿದ ಮನೆಯಲ್ಲಿ ಹುಟ್ಟಿದ್ದರು. ಆ ಹುಟ್ಟಿದ ಮನೆಯನ್ನು ಅವರ ನೆನಪಿಗಾಗಿ ಕೆಲವು ವರ್ಷಗಳ ಹಿಂದೆ ಕರ್ನಾಟಕ ಸರಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಗ್ರಂಥಾಲಯ ಎಂಬದಾಗಿ ತೆರೆಯಲಾಯಿತು. ಈ ಗ್ರಂಥಾಲಯದ ಮೇಲ್ವಿಚಾರಕನಾಗಿ ಮಹೇಶ್ ಎಂಬವರು ನೇಮಕವಾಗಿದ್ದರು. ದಿನನಿತ್ಯ ಹಲವಾರು ಓದುಗರು ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಈ ಗ್ರಂಥಾಲಯ ಮೇಲ್ವಿಚಾರಕ ಮಹೇಶ್ ಸೇವೆಯಿಂದ ನಿವೃತ್ತರಾಗಿದ್ದು, ಅಂದಿನಿಂದ ಈ ಗ್ರಂಥಾಲಯಕ್ಕೆ ಬಂದು ಬೀಗ ಹಾಕಿದ ಬಾಗಿಲನ್ನು ನೋಡಿಕೊಂಡು ವಾಪಾಸು ತೆರಳುತ್ತಿರುವದಾಗಿ ಓದುಗರು ಪತ್ರಿಕೆಯೊಂದಿಗೆ ದೂರಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಕೇಂದ್ರ ಗ್ರಂಥಾಲಯವು ಕೂಡ ತಟಸ್ಥವಾಗಿರುವದು ಪ್ರಶ್ನಾರ್ಹವಾಗಿದೆ.