ಪೆರಾಜೆ, ಅ. 15: ಕೊಡಗಿನ ಪೆರಾಜೆ ಗಡಿಯಲ್ಲಿ ಸುಳ್ಯ ನ.ಪಂ. ವಿವಾದಾತ್ಮಕವಾಗಿ ನಿರ್ಮಿಸಿದ ಕಲ್ಲುಚರ್ಪೆ ಕಸ ವಿಲೇವಾರಿ ಘಟಕ ಮತ್ತೆ ತುಂಬಿ ತುಳುಕುತಿದ್ದು, ಇದರಿಂದ ಸುತ್ತಮುತ್ತಲಿನ ವಾಸಿಸುವ ಜನರಿಗೆ ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಮಲಿನವಾಗಿದ್ದು, ಇದರ ಬಗ್ಗೆ ಸುಳ್ಯ ನಗರ ಪಂಚಾಯತಿಯ ಗಮನಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷಿಸುವ ಮೂಲಕ ಮತ್ತೆ ಸುಳ್ಯ ನಗರದ ಕಸವನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕುವದನ್ನು ವಿರೋಧಿಸಿ ಪೆರಾಜೆ ಮತ್ತು ಆಲೆಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಈ ಕಸ ವಿಲೇವಾರಿ ಘಟಕದಲ್ಲಿ ಕಸಹಾಕುವ ವಿಚಾರದ ಬಗ್ಗೆ ಹೋರಾಟ ನಡೆಸಿದೆವು. ನಂತರ ನ್ಯಾಯಾಲಯದ ಮೆಟ್ಟಿಲೇರಿ ಆ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಡಿ.ಸಿ. ಆಧುನಿಕ ತಂತ್ರಜ್ಞಾನ ಬಳಸಿ ವ್ಯವಸ್ಥೆ ಮಾಡುವದಾಗಿ ಹೇಳಿದ್ದರಿಂದ ಕೋರ್ಟ್‍ನಲ್ಲಿ ಅವರಿಗೆ ಜಯ ಸಿಕ್ಕಿತು. ಆದರೆ ಡಿ.ಸಿ. ಅವರು ಹೇಳಿದಂತೆ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಈವರೆಗೆ ಮಾಡಲಿಲ್ಲ. ಕಸವನ್ನು ಹಾಗೆ ತಂದು ಸುರಿಯುವ ವ್ಯವಸ್ಥೆ ಆಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಜನರು ಅನುಭವಿಸುತ್ತಿರುವ ತೊಂದರೆಗಳು ಗೊತ್ತಿದೆ. ಮತ್ತೆ ಇಲ್ಲಿಗೆ ಕಸಹಾಕುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆ ಆಗಬಹುದು ಎಂದು ಎಚ್ಚರಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಪೀಚೆಮನೆ ಅಶೋಕ್, ಸುಳ್ಯ ನಗರದ ಕಸಕ್ಕೆ ದುಗಲಡ್ಕದಲ್ಲಿ ಜಾಗ ಗುರುತು ಮಾಡಿದ್ದರೂ ಸ್ಥಳೀಯರ ಒತ್ತಡಕ್ಕೆ ಮಡಿದು ಪುನಃ ಕಸವನ್ನು ಇಲ್ಲಿಯೇ ಹಾಕುತಿದ್ದಾರೆ. ಅಜ್ಜಾವರದಲ್ಲಿ ಜಾಗ ಗುರುತಿಸಲಾಯಿತು. ಅಲ್ಲಿಯೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿಯೂ ನಿಲ್ಲಿಸಲಾಯಿತು. ಆ ಪ್ರದೇಶದ ಜನರು ಮಾತ್ರ ಮನುಷ್ಯರು, ಹಾಗಾದರೆ ಈ ಭಾಗದ ನಾವು ಮನುಷ್ಯರಲ್ಲವೆ ಎಂದು ಪ್ರಶ್ನಿಸಿದರು. ಇಂದು ನಮ್ಮ ಬೇಡಿಕೆಯನ್ನು ಪಡೆದು ಕೂಡಲೇ ಈ ಪ್ರದೇಶಕ್ಕೆ ಕಸಹಾಕುವದನ್ನು ನಿಲ್ಲಿಸಬೇಕು; ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಸುಳ್ಯ ನ.ಪಂ. ಮಾಜಿ ಸದಸ್ಯ ಗೋಕುಲ್ ದಾಸ್ ಮಾತನಾಡಿ, ತಾನು ಸದಸ್ಯನಾಗಿದ್ದ ಸಂದರ್ಭದಲ್ಲಿ ಪೆರಾಜೆ ಸಮೀಪ ಕಸ ಹಾಕಬಾರದೆಂದು ಹೇಳಿದ್ದೆ. ನಂತರ ಬದಲಿ ಜಾಗದ ವ್ಯವಸ್ಥೆಯ ಸಲಹೆ ನೀಡಿದಾಗಲೂ ಅದು ಯಶಸ್ವಿಯಾಗಲಿಲ್ಲ. ಕಳೆದ ಒಂದು ವರ್ಷದಿಂದ ಈ ಪ್ರದೇಶಕ್ಕೆ ಕಸ ಬರುತ್ತಿರಲಿಲ್ಲ. ಈಗ ಮತ್ತೆ ಬರುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಇಲ್ಲವಾದಲ್ಲಿ ನ.ಪಂ.ಗೆ ಮುತ್ತಿಗೆ ಹಾಕಲಾಗುವದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷ ಹರೀಶ್, ಗ್ರಾ.ಪಂ. ಸದಸ್ಯರುಗಳಾದ ಕರಕರನ ಪುಷ್ಪಾವತಿ, ರಾಧಾಕೃಷ್ಣ ಪರಿವಾರಕಾನ, ಯೂಸುಫ್ ಅಂಜಿಕಾರು, ಜನಾರ್ದನ ಚೊಕ್ಕಾಡಿ, ಬಾಲಚಂದ್ರ ತೊಕ್ಕುಳಿ, ವೆಂಕಟೇಶ್, ದೇವಕಿ, ಅನಸ್, ತವಿದ್ ಸೇರಿದಂತೆ ಪೆರಾಜೆ ಮತ್ತು ಆಲೆಟ್ಟಿ ಗ್ರಾಮಸ್ಥರು ಭಾಗವಹಿಸಿದ್ದರು.
-ಕಿರಣ್ ಕುಂಬಳಚೇರಿ