ಮಡಿಕೇರಿ, ಅ. 14: ವೀರಾಜಪೇಟೆ ಬಳಿಯ ಬಾಳುಗೋಡಿನಲ್ಲಿ ಜರುಗಿದ ಕೊಡವ ನಮ್ಮೆಯಲ್ಲಿ ಪಾಲ್ಗೊಂಡು ಸಂತಸದಿಂದ ಹಿಂತಿರುಗುತ್ತಿದ್ದ ಯುವಕರಿದ್ದ ಬಸ್‍ಗೆ ಲಾರಿಯೊಂದು ಅಪ್ಪಳಿಸಿ, ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿ ಬಸ್‍ನಲ್ಲಿದ್ದ 16 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಮಂಡ್ಯ - ಮದ್ದೂರು ನಡುವಿನ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, ಗಂಭೀರ ಗಾಯಗೊಂಡಿರುವ ಈರ್ವರು ಸೇರಿದಂತೆ 16 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಎರಡು ದಿನಗಳ ಕಾಲ ಬಾಳುಗೋಡುವಿನಲ್ಲಿ ನಡೆದ ಕೊಡವ ನಮ್ಮೆ ನಿನ್ನೆ ಮುಕ್ತಾಯಗೊಂಡಿದೆ. ನಮ್ಮೆಯಲ್ಲಿ ಅಂತರ ಕೊಡವ ಸಮಾಜಗಳ ಸ್ಪರ್ಧೆಯಲ್ಲಿ ಬೆಂಗಳೂರು ಸಮಾಜದ ಪರವಾಗಿ ಪಾಲ್ಗೊಂಡಿದ್ದ ತಂಡ ಬಹುಮಾನ ಗೆದ್ದುಕೊಂಡ ಸಂಭ್ರಮದಲ್ಲಿ ಹಿಂದಿರುಗಿತ್ತು. ಚಾಲಕ ಸೇರಿ 19 ಮಂದಿಯಿದ್ದ ತಂಡ ಮಿನಿಬಸ್‍ನಲ್ಲಿ ತೆರಳುತ್ತಿದ್ದಾಗ ಮಂಡ್ಯ - ಮದ್ದೂರು ನಡುವಿನ ಹೆದ್ದಾರಿಯಲ್ಲಿ ರಾತ್ರಿ 11.30ರ ಸಮಯದಲ್ಲಿ ಎದುರುಗಡೆಯಿಂದ ಬಂದ ಭಾರೀ ಕ್ಯಾಂಟರ್ ಲಾರಿಯೊಂದು ಬ್ರೇಕ್ ವಿಫಲಗೊಂಡು ರಸ್ತೆ ವಿಭಜಕವನ್ನು ದಾಟಿ ಬಂದು ಬಸ್‍ಗೆ ಅಪ್ಪಳಿಸಿ ಮಗುಚಿಕೊಂಡಿದೆ. ಡಿಕ್ಕಿಯಾದ ರಭಸಕ್ಕೆ ಬಸ್‍ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಬೆಂಗಳೂರಿನವನಾದ ಸತೀಶ್ (26) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತರ 16 ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಕೊಪ್ಪಿರ ವಿನು ಅಯ್ಯಪ್ಪ ಅವರ ಪಕ್ಕೆಲುಬುಗಳಿಗೆ, ಕಿಡ್ನಿಗೂ ಪೆಟ್ಟಾಗಿದೆ. ಕಬ್ಬಚ್ಚಿರ ರಂಜು ಅಯ್ಯಣ್ಣ ಎಂಬವರ ಕಾಲು ಹಾಗೂ ತಲೆಗೆ ಪೆಟ್ಟಾಗಿದ್ದು, ಇವರಿಬ್ಬರೂ ಗಂಭೀರ ಗಾಯಗೊಂಡಿದ್ದಾರೆ.

ಇಬ್ಬರು ಪಾರು

ನಿನ್ನೆ ಸಂಜೆ ಹಿಂತಿರುಗಿದ ಈ ತಂಡ ರಾತ್ರಿ ಶ್ರೀರಂಗಪಟ್ಟಣದ ಬಳಿ ಊಟ ಮುಗಿಸಿಕೊಂಡು ಬೆಂಗಳೂರಿನತ್ತ ಹೊರಟಿದೆ. ಹೊರಟು ಕೆಲ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ತಂಡದಲ್ಲಿದ್ದ ಮುಕ್ಕಾಟಿರ ನಾಣಯ್ಯ ಹಾಗೂ ಗೌಡಂಡ ರೋಷನ್ ಅವರುಗಳು ಯಾವದೇ ಗಾಯಗಳಾಗದೆ ಪಾರಾಗಿದ್ದು, ಅವಘಡ ಆಗಿರುವ ಬಗ್ಗೆ ಕೈಬಿಲಿರ

(ಮೊದಲ ಪುಟದಿಂದ) ವಾಣಿ ಅವರಿಗೆ ಫೋನಾಯಿಸಿ ವಿಷಯ ತಿಳಿಸಿದ್ದಾರೆ. ಕೂಡಲೇ ಕೈಬಿಲಿರ ಬಿಪಿನ್, ವಾಣಿ, ಪೊನ್ನಚೆಟ್ಟಿರ ರಮೇಶ್, ಚಿರಿಯಪಂಡ ಸುರೇಶ್ ಹಾಗೂ ಬೇಪಡಿಯಂಡ ಸುಮಿ ಅವರುಗಳು ತಮ್ಮ ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಗಾಯಾಳುಗಳನ್ನು ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಡ್ಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ನಂತರ ಅಲ್ಲಿಂದ ಇವರುಗಳು ಸೇರಿ ಆ್ಯಂಬ್ಯುಲೆನ್ಸ್ ಹಾಗೂ ತಮ್ಮ ವಾಹನಗಳಲ್ಲಿ ಬೆಂಗಳೂರಿನ ಕೆಂಗೇರಿಯ ಉತ್ತರಳ್ಳಿ ಮುಖ್ಯ ರಸ್ತೆಯಲ್ಲಿರುವ ಬಿಜಿಎಸ್ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಗಾಯಾಳುಗಳು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡೇಟಿರ ಸುನಿಲ್ ಪೊನ್ನಣ್ಣ, ಬೊಪ್ಪಂಡ ಮಿಥುನ್ ಮಾದಪ್ಪ, ಕೇಕಡ ದೇವಯ್ಯ, ಕೇಕಡ ಪವನ್ ಪಳಂಗಪ್ಪ, ನೆರ್ಪಂಡ ಕೆನಿಲ್ ಕಾರ್ಯಪ್ಪ, ಬೇಪಡಿಯಂಡ ಆದರ್ಶ್ ಉತ್ತಪ್ಪ, ಬಾಳೆಯಡ ವಿನು ಮಂದಣ್ಣ, ಬಾಳೆಯಡ ದಿನು ಬೋಪಣ್ಣ, ಅಣ್ಣಾರ್‍ಕಂಡ ಮೊಣ್ಣಪ್ಪ, ಅಣ್ಣಾರ್‍ಕಂಡ ದೇವಯ್ಯ, ಜಗ್ಗಾರಂಡ ರೋಹಿತ್, ಮುಳುವೆರ ಪವನ್ ಪೊನ್ನಪ್ಪ, ಕಿರುಂದಂಡ ದೇವಯ್ಯ, ಚೆರಿಯಪಂಡ ಬನ್ಸಿ ಬೋಪಣ್ಣ ಇವರುಗಳು ಇನ್ನುಳಿದ ಗಾಯಾಳುಗಳಾಗಿದ್ದಾರೆ.

ಲಾರಿ ಚಾಲಕ ಹಾಗೂ ಕ್ಲೀನರ್ ಕೂಡ ಗಂಭೀರ ಗಾಯಗೊಂಡಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.