ಭಾಗಮಂಡಲ, ಅ. 14: ಜೀವನದಿ ಪಾಪವಿನಾಶಿನಿ ಮಾತೆ ಕಾವೇರಿಯು ತಾ. 18 ರಂದು ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಬೆಳಗ್ಗಿನ ಜಾವ 12.59ಕ್ಕೆ ಕರ್ಕಟಕ ಲಗ್ನದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ಜಾತ್ರೆಗೆ ಕಾವೇರಿ ಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿ ಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.ಜಾತ್ರೆಯ ಅಂಗವಾಗಿ ಬಿಗಿಭದ್ರತೆಗಾಗಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಾನಿಗಳು, ಪತ್ರಿಕಾ ಮಾಧ್ಯಮದವರು ಹಾಗೂ ಜನಪ್ರತಿನಿಧಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ತೀರ್ಥ ಕುಂಡಿಕೆಯಲ್ಲಿ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಒಳಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ತಲಕಾವೇರಿ ಯಲ್ಲಿ ರಾತ್ರಿ 10 ಗಂಟೆಯಿಂದ ತೀರ್ಥೋದ್ಭವದವರೆಗೆ ಮಂತ್ರಪಠನ ನಡೆಯಲಿದೆ. ತೀರ್ಥೋದ್ಭವದ ಕಾರ್ಯಕ್ರಮಗಳು ಈ ಬಾರಿ ಅನಂತಕೃಷ್ಣ ನೇತೃತ್ವದಲ್ಲಿ ನಡೆಯಲಿದ್ದು, ಹತ್ತಕ್ಕೂ ಅಧಿಕ ಅರ್ಚಕರು ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ತೀರ್ಥೋದ್ಭವ ವೀಕ್ಷಿಸಲು ಎರಡು ಎಲ್ಸಿಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ. ಪೊಲೀಸರು ಪಾರ್ಕಿಂಗ್ ವ್ಯವಸ್ಥೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ತೀರ್ಥ ಕುಂಡಿಕೆಯ ಸುತ್ತಲೂ ಮೇಲ್ಭಾಗದಲ್ಲಿ ಬ್ಯಾರಿಕೇಡ್
(ಮೊದಲ ಪುಟದಿಂದ) ಅಳವಡಿಸಿ ಭಕ್ತರು ಎಲ್ಲೂ ಒಳಕ್ಕೆ ನುಸುಳದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಬೆಳಕಿನ ವ್ಯವಸ್ಥೆಗಾಗಿ ತೀರ್ಥಕುಂಡಿಕೆ ಸುತ್ತಲೂ ಹೈ ಮಾಸ್ಟ್ ಲ್ಯಾಂಪ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ವಾಟರ್ಪ್ರೂಫ್ ಶಾಮಿಯಾನ ಅಳವಡಿಕೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುವ ಕಾರ್ಯವೂ ನಡೆಯುತ್ತಿದೆ. ಭಾಗಮಂಡಲ ಮುಖ್ಯದ್ವಾರದಿಂದ ತ್ರಿವೇಣಿ ಸಂಗಮ ಸೇರಿದಂತೆ ತಲಕಾವೇರಿಯವರೆಗೆ ಎರಡು ಸಾವಿರಕ್ಕೂ ಅಧಿಕ ಟ್ಯೂಬ್ಲೈಟ್ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯದ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಒಂದು ತಿಂಗಳ ಕಾಲ ಏಕೀಕರಣ ರಂಗದಿಂದ ಅನ್ನದಾನ ನಡೆಯಲಿದೆ. ತಲಕಾವೇರಿಯಲ್ಲಿ ಸಂಕಲ್ಪ ಮಂಟಪ ನಿರ್ಮಾಣವಾಗಿದ್ದು, ತಾ. 16 ರಂದು ಉದ್ಘಾಟನೆಗೊಳ್ಳಲಿದೆ. ಜಾತ್ರೆಯ ಅಂಗವಾಗಿ ಸಂಜೆ 6 ರಿಂದ 10 ಗಂಟೆವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಪಿಂಡಪ್ರಧಾನ ಮುಡಿ ತೆಗೆಯುವದು ತಾ. 17 ರಂದು ಬೆಳಿಗ್ಗೆ 6.30 ರಿಂದ 3 ಗಂಟೆವರೆಗೆ ಹಾಗೂ 18 ರಂದು ಬೆಳಿಗ್ಗೆ 6 ಗಂಟೆಯಿಂದ 3.30ರ ವರೆಗೆ ನಡೆಯಲಿದೆ. ತಲಕಾವೇರಿಯಲ್ಲಿ ಅಕ್ಟೋಬರ್ 18 ರಂದು ಬೆಳಿಗ್ಗೆ 4.30ರವರೆಗೆ ತೀರ್ಥ ವಿತರಣೆ ನಡೆಯಲಿದ್ದು, ಬೆಳಿಗ್ಗಿನ ನಿತ್ಯಪೂಜೆಯ ಬಳಿಕ 6 ಗಂಟೆಯ ನಂತರ ಮತ್ತೆ ತೀರ್ಥವಿತರಣೆ ಮುಂದುವರೆಯಲಿದೆ.
ಸಿದ್ಧತೆಗಳ ಕುರಿತು ‘ಶಕ್ತಿ’ಯೊಂದಿಗೆ ಭಾಗಮಂಡಲ -ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಕಾವೇರಿ ತೀರ್ಥೋದ್ಭವಕ್ಕೆ ಸಿದ್ಧತಾ ಕಾರ್ಯಗಳು ಮುಗಿಯುವ ಹಂತದಲ್ಲಿದ್ದು, ತಾ. 16 ರಂದು ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ತೀರ್ಥೋದ್ಭವದ 2 ಗಂಟೆಯ ನಂತರ ರಥಯಾತ್ರೆ ತಲಕಾವೇರಿಯನ್ನು ಪ್ರವೇಶಿಸಬೇಕಿದೆ. ದೇವಾಲಯದ ವತಿಯಿಂದ ಭಾಗಮಂಡಲ ಭಗಂಡೇಶ್ವರ ದೇವಾಲಯದ ತಾಮ್ರದ ಮೇಲ್ಛಾವಣಿಯನ್ನು 48ಲಕ್ಷ ರೂ.ಗಳಲ್ಲಿ ಸದ್ಯದಲ್ಲಿ ನಿರ್ಮಿಸಲಾಗುವದು. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಶ್ರಾದ್ಧವಿಧಾನ ನಡೆಯುವ ಸ್ಥಳದಲ್ಲಿ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸಲು 28.85 ಲಕ್ಷ ರೂ. ವೆಚ್ಚದಲ್ಲಿ ಜಾತ್ರೆಯ ಬಳಿಕ ಕೆಲಸ ಕಾರ್ಯಗಳು ಆರಂಭವಾಗಲಿದೆ ಎಂದು ಹೇಳಿದರು.
2012ರಲ್ಲಿ ಭಾಗಮಂಡಲದಲ್ಲಿ ಎರಡು ಹಂತದ ಯಾತ್ರಿ ನಿವಾಸ ನಿರ್ಮಿಸಲು 80 ಲಕ್ಷ ರೂ.ಗಳ ಅನುದಾನಕ್ಕೆ ಅನುಮೋದನೆ ದೊರೆತ್ತಿದ್ದು ಅದು 2019ರಲ್ಲಿ 94 ಲಕ್ಷ ರೂ. ಆಗಲಿದೆ ಎಂದು ತಿಳಿದುಬಂದಿದೆ. ಇದಕ್ಕೆ 14 ಲಕ್ಷ ರೂ.ಗಳನ್ನು ದೇವಾಲಯದ ವತಿಯಿಂದ ಭರಿಸಲಾಗುವದು. ತಾ. 17ರಂದು ರಾತ್ರಿ 11ಗಂಟೆವರೆಗೆ ತಲಕಾವೇರಿಗೆ ವಾಹನ ವ್ಯವಸ್ಥೆ ಇದ್ದು ಬಳಿಕ ಸ್ಥಳಾವಕಾಶ ನೋಡಿಕೊಂಡು ಖಾಸಗಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗುವದು. ತಾ. 17 ರಿಂದ ತಲಕಾವೇರಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ತೀರ್ಥ ಪಡೆಯಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವಂತಿಲ್ಲ. ಅಗತ್ಯಕ್ಕೆ ದೇವಾಲಯದ ಮೇಲ್ಛಾವಣಿ ಟ್ಯಾಂಕ್ನಿಂದ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಂಘಸಂಸ್ಥೆಗಳು ದಾರಿಯುದ್ದಕ್ಕೂ ತೀರ್ಥ ವಿತರಣೆ ಮಾಡದೆ ಒಂದೆಡೆ ನಿಂತು ತೀರ್ಥವಿತರಣೆ ಮಾಡುವಂತೆ ತಮ್ಮಯ್ಯ ಮನವಿ ಮಾಡಿದ್ದಾರೆ.
-ಕುಯ್ಯಮುಡಿ ಸುನಿಲ್