ಮಡಿಕೇರಿ, ಅ. 14: 2019-20ನೇ ಸಾಲಿನ ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಪರಿಷ್ಕರಿಸುವ ನಿಟ್ಟಿನಲ್ಲಿ ಈಗಾಗಲೇ ನಿಗದಿಪಡಿಸಲಾಗಿದ್ದ ಅವಧಿಯನ್ನು ಕೇಂದ್ರ ಚುನಾವಣಾ ಆಯೋಗ ನವೆಂಬರ್ 18ಕ್ಕೆ ವಿಸ್ತರಿಸಿದೆ.ಪ್ರತಿಯೊಬ್ಬ ಮತದಾರ ಮತದಾರರ ಪಟ್ಟಿಯಲ್ಲಿ ನಮೂದಾಗಿರುವ ತನ್ನ ಹಾಗೂ ಕುಟುಂಬ ಸದಸ್ಯರ ವೈಯಕ್ತಿಕ ಮಾಹಿತಿಗಳನ್ನು ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೆ. 11 ರಿಂದ ಅ. 15ರ ವರೆಗೆ ದೇಶದಾದ್ಯಂತ ಮತದಾರ ಪರಿಶೀಲನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಬಹಳಷ್ಟು ಸಂಖ್ಯೆಯಲ್ಲಿ ಇನ್ನೂ ಕೂಡ ಮತದಾರರು ತಮ್ಮ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕಿರು ವದರಿಂದ ನಿಗದಿಪಡಿಸಲಾಗಿದ್ದ ಅವಧಿಯನ್ನು ಇದೀಗ ನ. 18ಕ್ಕೆ ವಿಸ್ತರಿಸಲಾಗಿದೆ.

ನ. 25 ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದ್ದು, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳಿದ್ದರೆ ನ. 25 ರಿಂದ ಡಿ. 24 ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಂದಿನ ಜ. 10ರೊಳಗೆ ಎಲ್ಲಾ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ. ಜ. 20ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

ಏನು ಮಾಡಬೇಕು? ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿರುವ ಮತದಾರರ ಪರಿಶೀಲನೆ ಸಂಬಂಧ ಎಲ್ಲಾ ಮತದಾರರು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಆಧಾರ್ ಗುರುತಿನ ಚೀಟಿ ಇಲ್ಲದವರು ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತರು ಅಥವಾ ಪಂಚಾಯಿತಿ ನೌಕರರಿಗೆ ಸಲ್ಲಿಸಬೇಕು.

ಆ ಮೂಲಕ ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿ ಕೊಳ್ಳಬಹುದು. ಇಷ್ಟೇ ಅಲ್ಲದೆ ವೋಟರ್ ಹೆಲ್ಪ್‍ಲೈನ್ ಮೊಬೈಲ್ ಆ್ಯಪ್ ಮುಖಾಂತರ ಮತದಾರರ ಮಾಹಿತಿ ಪರಿಶೀಲನೆ ಅಥವಾ ತಿದ್ದುಪಡಿಗಳನ್ನು ಮಾಡಬಹುದಾಗಿದೆ.