ಮಡಿಕೇರಿ, ಅ. 14: ನಮ್ಮ ಭೂಮಿ, ಭಾಷೆ ಸಂಸ್ಕೃತಿ ಉಳಿದರೆ ಮಾತ್ರ ಜನಾಂಗ ಉಳಿಯಲು ಸಾಧ್ಯವೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು ನಾಚಪ್ಪ ಹೇಳಿದರು.

ಕೊಡವ ಸಮಾಜದಲ್ಲಿ ಎಲ್‍ಇಡಿ ಪರದೆ ಮೂಲಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ನಿರ್ದೇಶನದ ಕೊಡಗ್‍ರ ಸಿಪಾಯಿ ಕೊಡವ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಕೊಡವ ನೆಲೆ, ಭಾಷೆ ಉಳಿಯಲು ಹೆಚ್ಚಿನ ಕೆಲಸ ಮಾಡ ಬೇಕಾದ ಅಗತ್ಯವಿದೆ. ಅವರವರು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಕೊಡವಾಮೆಗೆ ಸೇವೆ ಸಲ್ಲಿಸು ವಂತಾಗಬೇಕು. ನಾಟಕ, ಚಲನಚಿತ್ರದ ಮೂಲಕ ನಮ್ಮ ಭಾಷೆಯನ್ನು ಉಳಿಸಿದಲ್ಲಿ ನಮ್ಮ ಭೂಮಿಯು ಉಳಿದುಕೊಳ್ಳಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಮಾತನಾಡಿ, ನಾನು ಇದುವರೆಗೂ 4 ಚಿತ್ರಗಳನ್ನು ಮಾಡಿದ್ದೇನೆ. ಈ ಚಿತ್ರ ಎರಡನೇ ಕೊಡವ ಸಿನಿಮವಾಗಿದೆ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಜಿ ಪ್ರಾಂಶುಪಾಲೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡಗಿನ ಮಂದಿ ಚಿತ್ರವನ್ನು ನೋಡುವಂತಾಗಲಿ. ಮುಂದಿನ ದಿನದಲ್ಲಿ ಸಿನಿಮಾಕ್ಕೆ ಹೆಚ್ಚಿನ ಪ್ರಚಾರ ಸಿಗುವಂತಾಗಲಿ ಎಂದು ಆಶಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿದರು.

ಚಿತ್ರದಲ್ಲಿ ಅಭಿನಯಿಸಿರುವ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ, ಹಂಚೆಟ್ಟಿರ ಮನು, ಚಿತ್ರದ ವಿತರಕ ಬಾಳೆಯಡ ಪ್ರತೀಶ್, ಗಗನ್ ಗಣಪತಿ, ಚಿತ್ರದಲ್ಲಿ ನಟಿಸಿದ ಕಲಾವಿದರುಗಳು ಪಾಲ್ಗೊಂಡಿದ್ದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.

ಕೊಡಗ್‍ರ ಸಿಪಾಯಿ ಚಿತ್ರ ಮಂಗಳವಾರ, ಬುಧವಾರ ಕೊಡವ ಸಮಾಜದಲ್ಲಿ 11, 2 ಹಾಗೂ ಸಂಜೆ 6.30 ಕ್ಕೆ ಎಲ್‍ಇಡಿ ಪರದೆ ಮೂಲಕ ಪ್ರದರ್ಶನವಾಗಲಿದೆ.