ಮಡಿಕೇರಿ, ಅ.14: ಏಳನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುವದು ಮಕ್ಕಳ ಮಾನಸಿಕ ಬೆಳವಣಿಗೆಗೆ ಮಾರಕವಾಗಲಿದೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎ. ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನಾವು ಕಲಿಕೆಗಿಂತಲೂ ಹೆಚ್ಚಿನ ಮಹತ್ವವನ್ನು ಪರೀಕ್ಷೆಗೆ ನೀಡುತ್ತಿದ್ದು, ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಅಗತ್ಯವಿಲ್ಲವೆಂದರು. ಪ್ರತಿಯೊಂದು ಮಗು ನಿಗದಿತ ಕಲಿಕಾ ಮಟ್ಟ ತಲುಪಲು ಅಗತ್ಯವಾಗಿ ಆಗಬೇಕಾದ ಕಲಿಕಾ ಪ್ರಕ್ರಿಯೆ ನಡೆಯುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕೆಂದು ಆಗ್ರಹಿಸಿದರು.
ಒಂದೊಮ್ಮೆ ಪಬ್ಲಿಕ್ ಪರೀಕ್ಷೆ ನಡೆಸುವದೇ ಆದಲ್ಲಿ, ಮೊದಲು ಸರ್ಕಾರಿ ಶಾಲೆಗಳಿಗೆ ಶಿಕ್ಷಣಕ್ಕೆ ಪÀÇರಕವಾಗಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದರು. ಪ್ರಸ್ತುತ ಸಾಕಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತ್ತು ವಿಷಯವಾರು ಬೋಧನೆಗೆ ಶಿಕ್ಷಕರಿಲ್ಲದ ಪರಿಸ್ಥಿತಿ ಇದೆ. ಬೋಧನೆಯ ಕೆಲಸ ಕಾರ್ಯಗಳ ಜೊತೆಯಲ್ಲೇ ಶಿಕ್ಷಕರಿಗೆ ಬೋಧನೇತರ ಕೆಲಸ ಕಾರ್ಯಗಳನ್ನು ಹೆಚ್ಚಾಗಿ ನೀಡಲಾಗುತ್ತಿದ್ದು, ಇದು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಶಿಕ್ಷಕರನ್ನು ಇತರ ಕೆಲಸ, ಕಾರ್ಯಗಳಿಂದ ಮುಕ್ತಗೊಳಿಸಿ ಕೇವಲ ಬೋಧನೆಯತ್ತ ಗಮನ ಹರಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಎನ್ನುವ ಸರ್ಕಾರದ ತೀರ್ಮಾನ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ವಿರುದ್ಧವಾಗಿದೆ. ಅಲ್ಲದೆ ಭಾರತದ ಸಂವಿಧಾನದ ಅನ್ವಯ ಮಕ್ಕಳ ಹಿತಾಸಕ್ತಿ ಹಾಗೂ ಆರೋಗ್ಯಕರ ಬೆಳವಣಿಗೆಯ ಮೂಲತತ್ತ್ವಗಳನ್ನು ಉಲ್ಲಂಘಿಸಿ ದಂತ್ತಾಗುತ್ತದೆ ಎಂದು ನಾಗೇಶ್ ಹೇಳಿದರು. ಸಮರ್ಪಕವಾಗಿ ಕಲಿಸದೆ ಅನುತ್ತೀರ್ಣಗೊಳಿಸುವದು ಸುಲಭ. ಆದರೆ, ಅನುತ್ತೀರ್ಣಗೊಳ್ಳದಂತೆ ಕಲಿಸುವದು ಕಷ್ಟವೆಂದು ನಾಗೇಶ್ ಹೇಳಿದರು.
ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಎನ್.ಬಿ.ಮೋಹನ್ ಮಾತನಾಡಿ, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ-2009 ರಡಿ ಮಗುವನ್ನು ಒಂದೇ ತರಗತಿಯಲ್ಲಿ ಒಂದು ಶೈಕ್ಷಣಿಕ ಅವಧಿಯ ನಂತರ ತಡೆಹಿಡಿಯುವದು ಅಥವಾ ಶಾಲೆಯಿಂದ ಹೊರಹಾಕುವದನ್ನು ನಿಷೇಧಿಸುವದು ಪ್ರಮುಖ ಅಂಶವೆಂದು ಗುರುತಿಸಲಾಗಿತ್ತು. ಆದರೆ, ಇದೀಗ ಮತ್ತೆ ಪಬ್ಲಿಕ್ ಪರೀಕ್ಷೆಯ ಮೂಲಕ ಅದನ್ನು ಅನುಷ್ಠಾನಗೊಳಿಸುವ ಪ್ರಯತ್ನಕ್ಕೆ ಮುಂದಾಗಿರುವದು ಸರಿಯಾದ ಕ್ರಮವಲ್ಲವೆಂದರು.
ವೇದಿಕೆಯ ವೀರಾಜಪೇಟೆ ತಾಲೂಕು ಅಧ್ಯಕ್ಷ ಅಪ್ರೋಝ್ ಮಾತನಾಡಿ, ಮಕ್ಕಳು ನಿಗದಿತ ಕಲಿಕಾ ಸಾಮಥ್ರ್ಯಗಳನ್ನು ಸಾಧಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಶೈಕ್ಷಣಿಕ ಬೆಂಬಲ ಸಂಸ್ಥೆಗಳಾದ ಬಿಆರ್‍ಸಿ, ಡಯಟ್, ಡಿಎಸ್‍ಇಆರ್‍ಟಿ, ಶಿಕ್ಷಕರನ್ನು ಹೊಣೆಮಾಡುವ ಬದಲಾಗಿ ಮಕ್ಕಳನ್ನು ಬಲಿಪಶು ಮಾಡುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ವೀರಾಜಪೇಟೆ ತಾಲೂಕು ಕಾರ್ಯ ದರ್ಶಿ ಬಿ.ಕೆ.ಕರ್ತ ಉಪಸ್ಥಿತರಿದ್ದರು.