ಮಡಿಕೇರಿ, ಅ. 14: ಪ್ರಸಕ್ತ ವರ್ಷ ದಸರಾ ಉತ್ಸವದಲ್ಲಿ ದಶಮಂಟಪಗಳ ತೀರ್ಪುಗಾರಿಕೆ ಯಲ್ಲಿ ಉಂಟಾಗಿರುವ ಗೊಂದಲ ಇನ್ನೂ ಕೂಡ ನಿವಾರಣೆಯಾಗಿಲ್ಲ. ದಶಮಂಟಪ ಸಮಿತಿ ತೀರ್ಪಿನ ವಿರುದ್ಧ ಅಸಮಾಧಾನ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ತಮ್ಮ ನಿಲುವಿನ ಬಗ್ಗೆ ಸಮರ್ಥಿಸಿಕೊಂಡಿದ್ದು, ಕೋಟೆ ಮಾರಿಯಮ್ಮ ಸನ್ನಿಧಿಯಲ್ಲಿ ಪ್ರಮಾಣ ಮಾಡುವದಾಗಿಯೂ ಹೇಳಿದ್ದರು. ಅದರಂತೆ ನಿನ್ನೆ ದಿನ ಅವರು ಅಲ್ಲಿಗೆ ತೆರಳಿದ್ದಾರೆ. ಆದರೆ ಅಲ್ಲಿ ಜಮಾಯಿಸಿದ್ದ ಕೋಟೆಮಾರಿಯಮ್ಮ ದೇವಾಲಯ ಪ್ರಮುಖರು ಮಂಟಪ ತೀರ್ಪುಗಾರಿಕೆ ಗೊಂದಲದ ಬಗ್ಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು, ಆಣೆ ಪ್ರಮಾಣ ಸರಿಯಲ್ಲ ಎಂದು ಹೇಳಿದರು ಎನ್ನಲಾಗಿದೆ. ಬಳಿಕ ಅಲ್ಲಿಯೇ ತೀರ್ಪಿನ ಕುರಿತು ಚರ್ಚೆ - ವಿಚರ್ಚೆಗಳು ನಡೆದಿದ್ದು, ಅಂತಿಮವಾಗಿ ಯಾವದೇ ತೀರ್ಮಾನವಾಗಿಲ್ಲ ಎಂದು ತಿಳಿದುಬಂದಿದೆ.