ಮಡಿಕೇರಿ, ಅ. 14: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪಣ್ಣೇಕರ್ ಅವರ ಪುತ್ರಿ ಎರಡೂವರೆ ವರ್ಷದ ಬಾಲೆ ಕುಶಿ ಸರಕಾರೀ ಅಂಗನವಾಡಿಯಲ್ಲಿ ಪ್ರವೇಶ ಪಡೆದಿದ್ದಾಳೆ. ಇಂದಿನಿಂದ ಕುಶಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಬಳಿಯಿರುವ ಅಂಗನವಾಡಿಯಲ್ಲಿ ತನ್ನ ಶೈಕ್ಷಣಿಕ ಜೀವನದ ಪ್ರಾರಂಭಕ್ಕೆ ಮುಂದಡಿಯಿಟ್ಟಿದ್ದಾಳೆ. ಇತರ ಮಕ್ಕಳೊಂದಿಗೆ ಬೆರೆಯುವ ಕ್ಷಣಗಳ ಅನುಭವಕ್ಕೆ ಇದು ನಾಂದಿಯಾಗಲಿದೆ.

ಈ ಕುರಿತಾಗಿ ‘ಶಕಿ’ ಎಸ್.ಪಿ. ಸುಮನ್ ಅವರ ಅಭಿಪ್ರಾಯ ಬಯಸಿದಾಗ ‘ಮಕ್ಕಳು ನೈತಿಕತೆ ಹಾಗೂ ಮೌಲ್ಯಗಳನ್ನು ಅರಿಯಲು ಇಂತಹ ಸರಕಾರೀ ಅಂಗನವಾಡಿಯಲ್ಲಿ ಸೇರಿಸಬೇಕೆಂಬ ಬಯಕೆಯಿತ್ತು. ಈ ಅಂಗನವಾಡಿ ಉತ್ತಮವಾಗಿ ನಡೆಯುತ್ತಿರುವದಾಗಿ ತಿಳಿದುಕೊಂಡಿದ್ದು ಅಲ್ಲಿಗೆ ಸೇರಿಸಿದ್ದೇನೆ’ ಎಂದು ಮುಕ್ತ ನುಡಿಯಾಡಿದರು.