ಗೋಣಿಕೊಪ್ಪಲು, ಅ.14: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ರೈತರು ತಮ್ಮ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿದರು.
ಬೃಹತ್ ಸಮಾವೇಶದಲ್ಲಿ ಸರ್ಕಾರದ ಪರವಾಗಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ರೈತರೊಂದಿಗೆ ವಿಶೇಷ ಸಭೆ ನಡೆಸುತ್ತೇನೆ. ಜಿಲ್ಲೆಗೆ ಆಗಮಿಸಿದ ಸಂದರ್ಭ ರೈತ ಮುಖಂಡರೊಂದಿಗೆ ಚರ್ಚಿಸುತ್ತೇನೆ. ಯಾವದೇ ಸಂದರ್ಭದಲ್ಲಿ ರೈತರು ನನ್ನನ್ನು ಖುದ್ದು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು, ಈ ವಿಷಯದಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿ ಕೊಡಗು ಜಿಲ್ಲೆಯ ರೈತರಿಗೆ ಆದ ತೊಂದರೆಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಕೊಡಗು ಜಿಲ್ಲಾ ರೈತ ಮುಖಂಡರ ಮನವಿ ಪತ್ರ ಸ್ವೀಕರಿಸಿ ಭರವಸೆಯಿತ್ತರು. ಕಂದಾಯ ಸಚಿವ ಆರ್. ಅಶೋಕ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಜರಿದ್ದರು.
ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತರ ಬೃಹತ್ ವಾಹನ ಜಾಥಾ ತಲಕಾವೇರಿಯಿಂದ ಹೊರಟು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ರೈತರ ಹೋರಾಟಕ್ಕೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ನಡೆದ ರೈತ ಜಾಥಾ ಕಾರ್ಯಕ್ರಮಕ್ಕೆ ವೀರಚಕ್ರ ಪ್ರಶಸ್ತಿ ಪಡೆದ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಅಂತರ್ರಾಷ್ಟ್ರೀಯ ರ್ಯಾಲಿ ಪಟು ಜಗತ್‍ನಂಜಪ್ಪ, ಇತರ ಗಣ್ಯರು ಹಸಿರು ನಿಶಾನೆ ತೋರಿಸಿದ್ದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ರೈತರ ಸಮಾವೇಶದಲ್ಲಿ ಜಿಲ್ಲೆಯ ಪರವಾಗಿ ಅಂತರ್ರಾಷ್ಟ್ರೀಯ ಅಥ್ಲೀಟ್ ಪಟು ಅರ್ಜುನ್ ದೇವಯ್ಯ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಟೈಗರ್ ಬಿದ್ದಂಡ ಅಶೋಕ್ ಕುಮಾರ್, ಬೃಹತ್ ವೇದಿಕೆಯಲ್ಲಿ ಕೊಡಗು ಜಿಲ್ಲೆಯ ಪರವಾಗಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಕೊಡಗು ಜಿಲ್ಲಾ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ಇಟ್ಟೀರ ಸಬೀತ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪೊನ್ನಂಪೇಟೆ ಹೋಬಳಿ ಸಂಚಾಲಕ ಅಲೆಮಾಡ ಮಂಜುನಾಥ್ ಟಿ.ಶೆಟ್ಟಿಗೇರಿಯ ಸಂಚಾಲಕ ಅಪ್ಪಚಂಗಡ ಮೋಟಯ್ಯ, ಶ್ರೀಮಂಗಲ ಹೋಬಳಿ ಸಂಚಾಲಕ, ಬಾಚಮಾಡ ಭವಿ ಕುಮಾರ್, ಟಿ.ಶೆಟ್ಟಿಗೇರಿ ಸಂಚಾಲಕ ಕಂಭ ಕಾರ್ಯಪ್ಪ, ಹುದಿಕೇರಿಯ ಸಂಚಾಲಕ ಸೂರಜ್ ಯುಕೋ ಸಂಘಟನೆಯ ಅಧ್ಯಕ್ಷ ಮಂಜು ಚಿಣ್ಣಪ್ಪ, ರೈತ ಮುಖಂಡರುಗಳಾದ ಮಲ್ಚೀರ ಅಶೋಕ್, ತೀತರಮಾಡ ರಾಜ, ಸುನೀಲ್, ಪುಚ್ಚಿಮಾಡ ಅಶೋಕ್, ಸುನೀಲ್, ಅಳಮೇಂಗಡ ಮೋಟಯ್ಯ, ವಿವಿಧ ಮಠದ ಸ್ವಾಮೀಜಿಗಳು ಭಾಗವಹಿಸಿದ್ದರು.
ಚಿತ್ರ ವರದಿ, ಹೆಚ್.ಕೆ.ಜಗದೀಶ್