ವೀರಾಜಪೇಟೆ, ಅ. 12: ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಕೊಡವ ಸಮಾಜಗಳ ನಡುವೆ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ ಕೊಡವ ಸಮಾಜ ಹಾಗೂ ನಾಪೋಕ್ಲು ಕೊಡವ ಸಮಾಜಗಳ ನಡುವೆ ಫೈನಲ್ಸ್ ಪಂದ್ಯಾಟ ತಾ. 13ರಂದು (ಇಂದು) ಅಪರಾಹ್ನ 2 ಗಂಟೆಗೆ ನಡೆಯಲಿದೆ.

ಇಂದು ನಡೆದ ಪ್ರಥಮ ಸೆಮಿಫೈನಲ್ಸ್‍ನಲ್ಲಿ ವೀರಾಜಪೇಟೆ ಕೊಡವ ಸಮಾಜ ತಂಡ 6-0 ಗೋಲುಗಳಿಂದ ಮೈಸೂರು ಕೊಡವ ಸಮಾಜ ತಂಡವನ್ನು ನಿರಾಯಾಸವಾಗಿ ಪರಾಭವ ಗೊಳಿಸಿತು. ವೀರಾಜಪೇಟೆ ಪರ ಶರತ್ (2ನಿ), ತಿಮ್ಮಣ್ಣ (8ನಿ), ಮುದ್ದಪ್ಪ (13ನಿ), ಪೊನ್ನಣ್ಣ (20ನಿ), ಸೋಮಯ್ಯ (21ನಿ), ಸೋಮಣ್ಣ (27ನಿ)ದಲ್ಲಿ ಗೋಲು ದಾಖಲಿಸಿದರು.

ವೀರಾಜಪೇಟೆ ಪರ ಅಂತರ್ರಾಷ್ಟ್ರೀಯ ಆಟಗಾರ ಚೆಂದಂಡ ನಿಕಿನ್ ತಿಮ್ಮಯ್ಯ, ಏಕಲವ್ಯ ಪ್ರಶಸ್ತಿ ವಿಜೇತ ಕರಿನೆರವಂಡ ಸೋಮಣ್ಣ, ಇಂಡಿಯನ್ ಕ್ಯಾಂಪರ್ ಕುಪ್ಪಂಡ ಸೋಮಯ್ಯ, ಮಾಳೇಟಿರ ಮುದ್ದಪ್ಪ, ಪುಲಿಯಂಡ ತಿಮ್ಮಣ್ಣ ಉತ್ತಮ ಆಟ ಪ್ರದರ್ಶಿಸಿದರು.

ನಾಪೋಕ್ಲು ಕೊಡವ ಸಮಾಜ 4-0 ಗೋಲುಗಳಿಂದ ಮೂರ್ನಾಡು ಕೊಡವ ಸಮಾಜವನ್ನು ಮಣಿಸಿತು. ನಾಪೋಕ್ಲು ಪರ ಅಪ್ಪಣ್ಣ (5,11ನಿ), ಅಪ್ಪಣ್ಣ (54,60ನಿ)ದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಟ್ಟರು.

ತೀರ್ಪುಗಾರರಾಗಿ ಚ್ಯೆಯ್ಯಂಡ ಅಪ್ಪಚ್ಚು, ಚೋಯಮಾಡಂಡ ಚಂಗಪ್ಪ, ಚಂದಪಂಡ ಆಕಾಶ್, ಕೋಡಿಮಣಿ ಯಂಡ ಗಣಪತಿ, ತಾಂತ್ರಿಕ ಸಮಿತಿ ಯಲ್ಲಿ ಕುಪ್ಪಂಡ ದಿಲನ್ ಬೋಪಣ್ಣ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ ಕಾರ್ಯನಿರ್ವಹಿಸಿದರು.

ಭಾರದ ಗುಂಡು ಎಸೆತ: ಪುರುಷರ ಭಾರದ ಗುಂಡು ಎಸೆತದಲ್ಲಿ ವೀರಾಜಪೇಟೆ ಕೊಡವ ಸಮಾಜದ ಮಾತಂಡ ರನ್ನು (ಪ್ರ), ನಾಪೋಕ್ಲು ಕೊಡವ ಸಮಾಜದ ಬಾಚಮಂಡ ಲವ ಚಿಣ್ಣಪ್ಪ (ದ್ವಿ), ಬೆಂಗಳೂರು ಕೊಡವ ಸಮಾಜದ ಬೊಳ್ಳಂಡ ರೋಷನ್ (ತೃ). ಮಹಿಳೆಯ ವಿಭಾಗದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಬೊಪ್ಪಂಡ ಕುಸುಮಾ (ಪ್ರ), ಮಡಿಕೇರಿ ಕೊಡವ ಸಮಾಜದ ಕೆಚ್ಚೇಟಿರ ರೇಷ್ಮಾ ದೇಚಮ್ಮ (ದ್ವಿ), ವೀರಾಜಪೇಟೆ ಕೊಡವ ಸಮಾಜದ ಮನಿಯಪಂಡ ದೇಚಮ್ಮ ಕಾಳಪ್ಪ (ತೃ) ಸ್ಥಾನ ಪಡೆದುಕೊಂಡರು.

ಪುರುಷರ ಹಾಗೂ ಮಹಿಳೆಯ ಹಗ್ಗಜಗ್ಗಾಟ ಫೈನಲ್ಸ್ ಪಂದ್ಯಾಟ ತಾ. 13ರಂದು (ಇಂದು) ನಡೆಯಲಿದೆ. ಪುರುಷರ ವಿಭಾಗದಲ್ಲಿ ನಾಪೋಕ್ಲು ಕೊಡವ ಸಮಾಜ ಹಾಗೂ ವೀರಾಜಪೇಟೆ ಕೊಡವ ಸಮಾಜ, ಮಹಿಳೆಯ ವಿಭಾಗದಲ್ಲಿ ಮಡಿಕೇರಿ ಕೊಡವ ಸಮಾಜ ಹಾಗೂ ನಾಪೋಕ್ಲು ಕೊಡವ ಸಮಾಜಗಳ ನಡುವೆ ನಡೆಯಲಿದೆ.