ಮಡಿಕೇರಿ, ಅ. 12 : ಮಡಿಕೇರಿ ದಸರಾ ದಶಮಂಟಪಗಳಿಗೆ ನೀಡಲಾದ ಬಹುಮಾನದ ತೀರ್ಪು ನಿಷ್ಪಕ್ಷಪಾತವಾಗಿದ್ದು, ಈ ವಿಚಾರದಲ್ಲಿ ಮೂಡಿರುವ ಗೊಂದಲ ನಿವಾರಣೆಗೆ ತಾ.13 ರಂದು (ಇಂದು) ನಗರದ ಶ್ರೀಕೋಟೆ ಮಾರಿಯಮ್ಮ ದೇವಾಲಯದಲ್ಲಿ ಪ್ರಮಾಣ ಮಾಡಲು ನಿರ್ಧರಿಸಿರುವದಾಗಿ ದಶಮಂಟಪ ಸಮಿತಿ ಅಧ್ಯಕ್ಷ ಸಿ.ಎಸ್. ರಂಜಿತ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಒಂದು ಗಂಟೆ ಕಾಲ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಹಾಜರಿರುತ್ತೇನೆ. ಬಹುಮಾನ ವಿತರಣೆಯ ಕುರಿತು ಮೂಡಿರುವ ಗೊಂದಲ ನಿವಾರಣೆಗೆ ಯಾರು ಬಂದು ಸ್ಪಷ್ಟೀಕರಣ ಕೇಳಿದರು ಉತ್ತರ ನೀಡಲು ಸಿದ್ಧ ಇರುವದಲ್ಲದೆ, ಕೋಟೆ ಮಾರಿಯಮ್ಮ ದೇವರ ಎದುರು ಪ್ರಮಾಣ ಮಾಡುವದಾಗಿ ಸ್ಪಷ್ಟಪಡಿಸಿದರು.

ಪ್ರತಿವರ್ಷ ದಸರಾದ ಕೊನೆಯ ದಿನ ಬಹುಮಾನ ವಿತರಣೆಯ ಸಂದರ್ಭ ಅಸಮಾಧಾನ ಮತ್ತು ಗೊಂದಲಗಳು ಮೂಡುವದು ಸಹಜ. ಆದರೆ ಈ ಬಾರಿ ತನ್ನ ಬಗ್ಗೆ ವೈಯಕ್ತಿಕ ನಿಂದನೆಗಳನ್ನು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ರಂಜಿತ್ ಕುಮಾರ್, ನಾಲ್ವರು ತೀರ್ಪುಗಾರರು ನೀಡಿದ ಅಂಕಗಳ ಆಧಾರದಲ್ಲಿ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆಯೇ ಹೊರತು ಯಾವದೇ ಪ್ರಭಾವ ಅಥವಾ ರಾಜಕೀಯ ಒತ್ತಡಗಳ ತೀರ್ಪಿನ ಮೇಲೆ ಪರಿಣಾಮ ಬೀರಿಲ್ಲವೆಂದರು.

ದಸರಾ ಮಹೋತ್ಸವ ಮುಗಿದಿದೆ, ಆದರೆ ಬಹುಮಾನದ ಬಗ್ಗೆ ಗೊಂದಲಗಳನ್ನು ಮುಂದು ವರೆಸಿಕೊಂಡು ಹೋಗಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹುಮಾನದ ವಿಚಾರವನ್ನು ಮುಂದಿಟ್ಟುಕೊಂಡು ನನ್ನ ವೈಯಕ್ತಿಕ ತೋಜೋವಧೆ ಮುಂದುವರೆದಿದ್ದು, ಸೂಕ್ತ ಕ್ರಮಕ್ಕಾಗಿ ಸೈಬರ್ ಕ್ರೈಂ ಅಧಿಕಾರಿಗಳ ಮೊರೆ ಹೋಗಿರುವದಾಗಿ ತಿಳಿಸಿದರು.

ದಶಮಂಟಪ ತೀರ್ಪಿನ ವಿರುದ್ಧ ಶೋಮ್ಯಾನ್ ಕ್ರಿಯೇಷನ್ಸ್ ಕೋರ್ಟ್ ಮೊರೆ ಹೋಗುವದಾಗಿ ತಿಳಿಸಿದೆ. ಆದರೆ ಸಮಿತಿಯು ಯಾವದೇ ಕಾನೂನಿನ ಹೋರಾಟಕ್ಕೆ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದರು. ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯದ ಮಂಟಪವಿದ್ದ ಸ್ಥಳಕ್ಕೆ ನಿಗದಿಪಡಿಸಿದ ಸಮಯಕ್ಕಿಂತ ಸ್ವಲ್ಪ ಬೇಗ ತೀರ್ಪುಗಾರರು ತೆರಳಿದ ಕಾರಣ ಮಂಟಪದ ಪದಾಧಿಕಾರಿಗಳು ಸಮಯಾವಕಾಶ ಕೋರಿದರು. ಇದಕ್ಕೆ ಸ್ಪಂದಿಸಿದ ನಾವು ಮಂಟಪದವರು ಕೇಳಿಕೊಂಡ ಸಮಯದಲ್ಲೇ ಪ್ರದರ್ಶನವನ್ನು ವೀಕ್ಷಿಸಿದ್ದೇವೆ. ಆದರೆ ಕಥಾಪ್ರಸಂಗವನ್ನು ಪ್ರಸ್ತುತ ಪಡಿಸುವ ಸಂದರ್ಭ ಮಂಟಪದಲ್ಲಿ ತಾಂತ್ರಿಕ ಅಡಚಣೆ ಕಾಣಿಸಿಕೊಂಡಿತು. ಮತ್ತೆ ಸಮಯಾವಕಾಶ ನೀಡಿ ಪ್ರದರ್ಶನ ವೀಕ್ಷಿಸಿ ತೀರ್ಪುಗಾರರು ನೀಡಿದ ಅಂಕಗಳನ್ನೇ ಆಧರಿಸಿ ಬಹುಮಾನ ಗಳನ್ನು ಘೋಷಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ತೀರ್ಪುಗಾರರು ನೀಡಿದ ಅಂಕಗಳನ್ನು ಸುಮಾರು ಏಳು ಮಂಟಪಗಳ ಪದಾಧಿಕಾರಿಗಳ ಸಮ್ಮುಖದಲ್ಲೇ ಒಟ್ಟು ಮಾಡಲಾಗಿದೆ. ಇಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ ಹೊರತು ದಶಮಂಟಪ ಸಮಿತಿಯ ಪಾತ್ರವಿರಲಿಲ್ಲವೆಂದರು. ತೀರ್ಪುಗಾರರ ಆಯ್ಕೆ ಸಂದರ್ಭ ಲಿಖಿತವಾಗಿ ಯಾರು ಬೇಕು ಎನ್ನುವದನ್ನು ತಿಳಿಸುವಂತೆ ಹತ್ತು ಮಂಟಪ ಸಮಿತಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣವರೆಗೂ ತೀರ್ಪುಗಾರರ ಆಯ್ಕೆ ಬಗ್ಗೆ ಯಾವ ಮಂಟಪದವರೂ ಕಾಳಜಿ ತೋರಿಲ್ಲ ಮತ್ತು ಲಿಖಿತ ರೂಪದ ಸಲಹೆ ನೀಡಿಲ್ಲ. ಇದರಿಂದ ಅನಿವಾರ್ಯವಾಗಿ ದಶಮಂಟಪ ಸಮಿತಿಯ ನೇತೃತ್ವ ವಹಿಸಿದ್ದ ಶ್ರೀದಂಡಿನ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ನಾಲ್ವರು ತೀರ್ಪುಗಾರರನ್ನು ಆಯ್ಕೆ ಮಾಡಿತು. ಈ ಬಗ್ಗೆ ಅಭಿಪ್ರಾಯ ಕೇಳಿದಾಗ ಉಳಿದ ಒಂಭತ್ತೂ ಮಂಟಪ ಸಮಿತಿಗಳು ಒಪ್ಪಿಕೊಂಡಿ ದ್ದವು ಎಂದು ರಂಜಿತ್ ಕುಮಾರ್ ಗಮನ ಸೆಳೆದರು.

ಕಳೆದ ವರ್ಷದವರೆಗೆ ಮಂಟಪದ ನಾಲ್ಕು ಪ್ರತ್ಯೇಕ ವಿಭಾಗಗಳಿಗೆ ಒಬ್ಬೊಬ್ಬ ತೀರ್ಪು ಗಾರರು ಪ್ರತ್ಯೇಕವಾಗಿ ಅಂಕಗಳನ್ನು ನೀಡುವ ಪರಿಪಾಠವಿತ್ತು. ಆದರೆ ಈ ರೀತಿಯ ಅಂಕಗಳಿಂದ ಮಂಟಪ ಸಮಿತಿಗಳು ಅಸಮಾಧಾನ ಗೊಳ್ಳುತ್ತಿದ್ದವು ಎನ್ನುವ ಕಾರಣಕ್ಕಾಗಿ ಪ್ರಸ್ತುತ ವರ್ಷ ನಾಲ್ವರು ತೀರ್ಪು ಗಾರರು ಎಲ್ಲಾ ನಾಲ್ಕು ವಿಭಾಗಕ್ಕೂ ಅಂಕ ನೀಡುವಂತೆ ನಿಯಮ ರೂಪಿಸಲಾಗಿತ್ತು. ಈ ಕ್ರಮದಿಂದ ಯಾವದೇ ಗೊಂದಲ ಸೃಷಿಯಾಗಿಲ್ಲವೆಂದು ಅವರು ಸಮರ್ಥಿಸಿಕೊಂಡರು.

ಪ್ರತಿವರ್ಷ ದಶಮಂಟಪಗಳ ಬಹುಮಾನ ಘೋಷಣೆ ಸಂದರ್ಭ ಅಸಮಾಧಾನ ಕಂಡು ಬರುತ್ತಿರುವದ ರಿಂದ ಯಾರೊಬ್ಬರೂ ತೀರ್ಪುಗಾರ ರಾಗಲು ಮುಂದೆ ಬರುತ್ತಿಲ್ಲ. ಈ ಬಾರಿ ತೀರ್ಪುಗಾರರನ್ನಾಗಿ ಆಯ್ಕೆ ಮಾಡಲು ಸುಮಾರು 38 ಮಂದಿಯನ್ನು ಸಂಪರ್ಕಿಸಿರುವದಾಗಿ ಅಸಹಾಯಕತೆ ವ್ಯಕ್ತಪಡಿಸಿದ ರಂಜಿತ್ ಕುಮಾರ್, ಗೊಂದಲದ ವಾತಾವರಣದಿಂದ ಪ್ರಸ್ತುತ ನಾಲ್ವರು ತೀರ್ಪುಗಾರರಿಗೂ ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.

ಜನರಿಂದ ಜನರಿಗಾಗಿ ದಸರಾ ಜನೋತ್ಸವ ನಡೆಯಬೇಕು, ಆದರೆ ಬಹುಮಾನಕ್ಕಾಗಿ ಇಷ್ಟೊಂದು ಅಸಮಾಧಾನ ವ್ಯಕ್ತಪಡಿಸುವದು ಸರಿಯಲ್ಲವೆಂದು ಅಭಿಪ್ರಾಯಪಟ್ಟರು. ಈ ಎಲ್ಲಾ ಗೊಂದಲಗಳಿಗೆ ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯ ಮಂಟಪ ಸಮಿತಿ ಮತ್ತು ಶ್ರೀಕೋಟೆ ಮಾರಿಯಮ್ಮ ದೇವಾಲಯ ಮಂಟಪ ಸಮಿತಿಯೇ ಕಾರಣವೆಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಸತೀಶ್, ಶ್ರೀದಂಡಿನ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ಕೆ.ಕೆ.ಮೋಹನ್ ಹಾಗೂ ಪದಾಧಿಕಾರಿ ಅಭಿಜಿತ್ ಉಪಸ್ಥಿತರಿದ್ದರು.