ಗೋಣಿಕೊಪ್ಪ ವರದಿ, ಅ. 12 ; ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಆಯೋಜಿಸಿರುವ ಮಾನಿಲ್ ಅಯ್ಯಪ್ಪ ಕೊಡವ-ಅಮ್ಮಕೊಡವ ವಾಲಿಬಾಲ್ ಪಂದ್ಯಾ ವಳಿಯಲ್ಲಿ ಅಮ್ಮಂಡ, ಅಣ್ಣಳಮಾಡ, ಮಲ್ಲಂಗಡ ಮತ್ತು ಮಂಡುವಂಡ ತಂಡಗಳು ಸೆಮಿ ಫೈನಲ್‍ಗೆ ಪ್ರವೇಶ ಪಡೆದವು.

ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ ಮತ್ತು ಕೊಡವ ಕೂಟ ಸಹಯೋಗದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಮ್ಮಂಡ, ಅಣ್ಣಳಮಾಡ, ಮಲ್ಲಂಗಡ ಮತ್ತು ಮಂಡುವಂಡ ತಂಡಗಳು ಜಯಗಳಿಸಿದವು.

ಅಮ್ಮಂಡ ತಂಡವು ದೇಯಂಡ ತಂಡವನ್ನು ಮಣಿಸಿತು. ಅಣ್ಣಳಮಾಡ ತಂಡವು ಚೆರಿಯಪಂಡ ವಿರುದ್ಧ ಜಯಗಳಿಸಿತು. ಮಲ್ಲಂಗಡ ತಂಡವು ಕೊಟ್ಟಂಗಡ ತಂಡವನ್ನು ಸೋಲಿಸಿತು. ಮಂಡುವಂಡ ತಂಡವು ಮಲ್ಲಮಾಡ ವಿರುದ್ಧ ಜಯ ಸಾಧಿಸಿತು.

ಮೊದಲ ಸುತ್ತಿನ ಪಂದ್ಯಗಳು : ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಅಮ್ಮಂಡ, ದೇಯಂಡ, ಅಣ್ಣಳಮಾಡ, ಚೆರಿಯಪಂಡ, ಮಲ್ಲಂಗಡ, ಕೊಟ್ಟಂಗಡ, ಮಲ್ಲಮಾಡ, ಮಂಡುವಂಡ ತಂಡಗಳು ಜಯ ಗಳಿಸಿದವು.

ಅಮ್ಮಂಡ ತಂಡವು ಆಪಟ್ಟೀರ ತಂಡವನ್ನು 2 ನೇರ ಸೆಟ್‍ನಿಂದ ಮಣಿಸಿತು. ದೇಯಂಡ ತಂಡವು ಕರ್ತಮಾಡ ತಂಡವನ್ನು 2 ನೇರ ಸೆಟ್‍ಗಳಿಂದ ಸೋಲಿಸಿತು. ಅಣ್ಣಳಮಾಡ ತಂಡವು ಅಮ್ಮತ್ತೀರ ವಿರುದ್ಧ ಚೆರಿಯಪಂಡ ತಂಡವು ಮಾಚಂಗಡ ತಂಡವನ್ನು ನೇರ ಸೆಟ್‍ಗಳಿಂದ ಮಣಿಸಿತು.

ಮಲ್ಲಂಗಡ ತಂಡವು ಕಾಳಿಮಾಡ ವಿರುದ್ಧ ಜಯಿಸಿತು. ಕೊಟ್ಟಂಗಡ ತಂಡವು ಸಣ್ಣುವಂಡ ತಂಡವನ್ನು ಸೋಲಿಸಿತು. ಚೆಪ್ಪುಡೀರ ಗೈರಾದ ಕಾರಣ ಮಲ್ಲಮಾಡ ಜಯಿಸಿತು. ಮಂಡುವಂಡ ತಂಡವು ಬೊಟ್ಟಂಗಡ ತಂಡವನ್ನು ಸೋಲಿಸಿತು.

ಉದ್ಘಾಟನೆ : ಮಾಯಮುಡಿ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್ ಉದ್ಘಾಟಿಸಿದರು. ಈ ಸಂದರ್ಭ ದಾನಿ ಕೊಂಗಂಡ ಗಣಪತಿ, ಚೆಪ್ಪುಡೀರ ಅಯ್ಯಪ್ಪ, ಕೊಡಂದೇರ ತಿಮ್ಮಯ್ಯ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಪ್ರಮುಖರಾದ ಸಣ್ಣುವಂಡ ರಮೇಶ್, ವಿನು ವಿಶ್ವನಾಥ್, ಆಪಟ್ಟೀರ ಪ್ರದೀಪ್, ಆಪಟ್ಟೀರ ಬೋಪಣ್ಣ, ಬಲ್ಯಂಡ ರವಿ, ಚೆಪ್ಪುಡೀರ ಪ್ರದೀಪ್ ಉಪಸ್ಥಿತರಿದ್ದರು.

ಇಂದು ಮಧ್ಯಾಹ್ನ 2 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಸ್ಪರ್ಧೆ, ವಾಲಗತ್ತಾಟ್ ಪೈಪೋಟಿ ನಡೆಯಲಿದೆ. ನಾಣಮಂಡ ವೇಣು ಮಾಚಯ್ಯ ತಂಡದಿಂದ ಕೊಡವ ಪಾಟ್ ನಡೆಯಲಿದೆ. -ಸುದ್ದಿಮನೆ.