ಸೋಮವಾರಪೇಟೆ, ಅ. 13: ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೋಮವಾರ ಬೆಳಗ್ಗಿನ ಪ್ರಾರ್ಥನಾ ವೇಳೆಯಲ್ಲಿ ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಜಾಗೃತಿ ಆಂದೋಲನ ನಡೆಸಲಾಯಿತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಇಕೋ ಕ್ಲಬ್ ವತಿಯಿಂದ ನಡೆದ ಪರಿಸರ ಜಾಗೃತಿ ಆಂದೋಲನ ನಡೆಸಲಾಯಿತು.
ಆಂದೋಲನದಲ್ಲಿ ಮುಖ್ಯ ಶಿಕ್ಷಕ ಹ್ಯಾರಿ ಮೊರಸ್ ಮಾತನಾಡಿ, ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಮತ್ತು ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಪಟಾಕಿ ಮುಕ್ತ ದೀಪಾವಳಿ ಆಚರಿಸುವ ಮೂಲಕ ತಮ್ಮನ್ನು ಪರಿಸರ ಸಂರಕ್ಷಣೆಗೆ ತೊಡಗಿಸಿಕೊಳ್ಳಬೇಕು ಎಂದರು.
ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ಶಿಕ್ಷಕ ಹ್ಯೂಬರ್ಟ್ ಡಯಾಸ್ ಮಕ್ಕಳಿಗೆ ‘ಹಣತೆ ಹಚ್ಚೋಣ - ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ, ಪಟಾಕಿ ತ್ಯಜಿಸಿ-ಪರಿಸರ ಸಂರಕ್ಷಿಸಿ, ನಮ್ಮ ನಡೆ ಹಸಿರು ದೀಪಾವಳಿ ಆಚರಣೆ ಕಡೆಗೆ, ಈ ನೆಲ ಜಲ, ಜೀವಿ ವೈವಿಧ್ಯ ಸಂರಕ್ಷಣೆ ಹಾಗೂ ಪರಿಸರಕ್ಕೆ ಯಾವದೇ ಧಕ್ಕೆಯನ್ನುಂಟು ಮಾಡುವದಿಲ್ಲ’ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ವಿದ್ಯಾರ್ಥಿಗಳು ಪಟಾಕಿ ತ್ಯಜಿಸೋಣ - ದೀಪ ಬೆಳಗಿಸೋಣ, ಹಣತೆ ಹಚ್ಚೋಣ ಬನ್ನಿ - ಪಟಾಕಿ ತ್ಯಜಿಸೋಣ ಬನ್ನಿ, ಹಣತೆ ಹಚ್ಚೋಣ - ಪಟಾಕಿ ತ್ಯಜಿಸೋಣ, ಪಟಾಕಿ ತ್ಯಜಿಸೋಣ - ಪರಿಸರ ಸಂರಕ್ಷಿ ಸೋಣ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತ ಘೋಷಣೆಗಳನ್ನು ಗಮನ ಸೆಳೆದರು.
ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಜಿಲ್ಲೆಯ ಎಲ್ಲಾ ಶಾಲೆಗಳ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಮೂಲಕ ಈ ಜಾಗೃತಿ ಆಂದೋಲನ ನಡೆಸುವ ಮೂಲಕ ಪಟಾಕಿ ಮುಕ್ತ ದೀಪಾವಳಿ ಆಚರಿಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ. ಈ ಆಂದೋಲನವು ಭವಿಷ್ಯದಲ್ಲಿ ಮಕ್ಕಳನ್ನು ಪರಿಸರ ರಾಯಭಾರಿ ಗಳನ್ನಾಗಿ ರೂಪಿಸಲು ಸಹಕಾರಿ ಯಾಗಿದೆ. ಮಕ್ಕಳು ಪಟಾಕಿ ಖರೀದಿ ಬದಲಿಗೆ ಆ ಹಣವನ್ನು ಇತರೆ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಈ ಜನಾಂದೋಲನದ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ನಾಗರಾಜಯ್ಯ ಮಾತನಾಡಿ, ಈ ಪರಿಸರ ಜಾಗೃತಿ ಆಂದೋಲನದ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.