ಮಡಿಕೇರಿ, ಅ. 13: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 20 ಹಾಗೂ ಎಸ್‍ಎಸ್‍ಎಲ್‍ಸಿಯ 20 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಯಿತು.

ಮಡಿಕೇರಿ ರೋಟರಿ ಕ್ಲಬ್ ನಿಂದ ಸರ್ಕಾರಿ ಪಿಯು ಕಾಲೇಜಿನ 20 ವಿದ್ಯಾರ್ಥಿಗಳು ಹಾಗೂ ಎಸ್‍ಎಸ್‍ಎಲ್‍ಸಿಯ 20 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ನಂತೆ 40 ಸಾವಿರ ರೂ.ಗಳನ್ನು ಶಿಕ್ಷಣದ ನೆರವಿಗಾಗಿ ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಮೂಲಕ ವಿತರಿಸಲಾಯಿತು.

ಈ ಸಂದರ್ಭ ಮಡಿಕೇರಿ ರೋಟರಿ ಕ್ಲಬ್‍ನ ಕಾರ್ಯವನ್ನು ಶ್ಲಾಘಿಸಿದ ಜೋಸೆಫ್ ಮ್ಯಾಥ್ಯೂ, ಹಲವಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆಯಿರುತ್ತದೆ. ಪ್ರತಿಭೆಗೆ ಯಾವದೇ ಕಾರಣಕ್ಕೂ ಆರ್ಥಿಕ ಸಮಸ್ಯೆ ತಲೆದೋರಬಾರದು. ಈ ನಿಟ್ಟಿನಲ್ಲಿ ಮಡಿಕೇರಿ ರೋಟರಿ ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಮುಂದಾಗಿರುವದು ಶ್ಲಾಘನೀಯ ಎಂದರು.

ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ. ನಾಗೇಶ್, ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ, ಮಡಿಕೇರಿ ರೋಟರಿಯ ನಿರ್ದೇಶಕರಾದ ಡಾ. ಎಂ.ಜಿ. ಪಾಟ್ಕರ್, ಅನಂತಸುಬ್ಬರಾವ್, ಸದಾಶಿವರಾವ್, ದೇವಣಿರ ಕಿರಣ್, ಡಾ. ಜಯಲಕ್ಷ್ಮಿ ಪಾಟ್ಕರ್, ಸಲೀಲಾ ಪಾಟ್ಕರ್, ಕಾಲೇಜಿನ ಪ್ರಾಂಶುಪಾಲ ವಿಜಯ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ದೇವಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.