ಕುಶಾಲನಗರ, ಅ. 12: ಕುಶಾಲನಗರ ಸಾಯಿ ದೇವಾಲಯದಲ್ಲಿ ಸಾಯಿಬಾಬರ 101ನೇ ಪುಣ್ಯಸ್ಮರಣೆ ಮತ್ತು ದೇವಾಲಯದ ಪ್ರಥಮ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ದೇವಾಲಯದಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಾಲಯದಲ್ಲಿ ಶ್ರೀ ಸಾಯಿ ಶತನಾಮಾವಳಿ ಹೋಮ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಶ್ರೀ ಸಾಯಿ ಅಷ್ಟೋತ್ತರ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಗಾಯತ್ರಿ ಶಾಂತಿ ಹೋಮ, ಮೃತ್ಯುಂಜಯ ಹೋಮಗಳು ನಡೆಯಿತು. ದೇವಾಲಯ ಅರ್ಚಕ ನವೀನ್ ಶುಕ್ಲ, ಕಣಿವೆಯ ರಾಘವೇಂದ್ರ ಆಚಾರ್ ಪೂಜಾ ವಿಧಿ ನೆರವೇರಿಸಿದರು.
ದೇವರಿಗೆ ಹಾಲು ಅಭಿಷೇಕ, ಸತ್ಯನಾರಾಯಣ ಪೂಜೆ, ಪುಷ್ಪಾರ್ಚನೆ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿಯಿಂದ ಸಾಮೂಹಿಕ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು, ಪ್ರಮುಖರಾದ ಓಬುಳ ರೆಡ್ಡಿ, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಇದ್ದರು.