ಮೂರ್ನಾಡು, ಅ. 12: ಪ್ರತಿ ರೈತರಿಗೂ ವೈಯಕ್ತಿಕ ಪಹಣಿ (ಆರ್‍ಟಿಸಿ) ಇಲ್ಲದಿರುವದರಿಂದ ಬಡವರು ಸಂಕಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಈ ಜ್ವಲಂತ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲೆಯ ಪ್ರತೀ ರೈತರಿಗೂ ವೈಯುಕ್ತಿಕ ಪಹಣಿ ನೀಡ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮೂರ್ನಾಡು ಸನಿಹದ ಹೊದ್ದೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು. ಕಬಡಕೇರಿ ದವಸ ಭಂಡಾರದಲ್ಲಿ ಆಯೋಜಿತವಾಗಿದ್ದ ಸಭೆಯಲ್ಲಿ 1965ರ ಕಂದಾಯ ಅಧಿನಿಯಮ ವಿಷಯ ಪ್ರಸ್ತಾಪಿಸಿದ ಕೂಡಂಡ ರವಿ, 1965ರ ಭೂ ಕಂದಾಯ ಅಧಿನಿಯಮದ ಪ್ರಕಾರ ಪ್ರತಿ ರೈತರಿಗೂ ವೈಯುಕ್ತಿಕ ಪಹಣಿಯನ್ನು ಸರಕಾರ ನೀಡಬೇಕು. ಅಧಿ ನಿಯಮ ಜಾರಿಗೆ ಬಂದು 55 ವರ್ಷಗಳು ಕಳೆದರೂ, ಜನತೆಗೆ ಇದರ ಲಾಭ ಸಿಕ್ಕಿಲ್ಲ. ನೌಕರರ ತುಟ್ಟಿ ಭತ್ಯೆಯಂತಹ ಹಲವಾರು ಕಾನೂನು-ನಿಯಮಗಳು ಪೂರ್ವಾನ್ವಯವಾಗಿ ತಕ್ಷಣ ಜಾರಿಯಾಗುತ್ತವೆ. ಆದರೆ, ಸರಕಾರ ಕಾನೂನನ್ನು ಸಕಾಲಿಕವಾಗಿ ಅನುಷ್ಠಾನ ಮಾಡದೆ ರೈತಾಪಿ ವರ್ಗದವರನ್ನು ಸತಾಯಿಸುತ್ತಿದೆ. ರೈತಾಪಿ ವರ್ಗದವರ ಬಗ್ಗೆ ಮಲತಾಯಿ ಧೋರಣೆ ತಳೆದಿದೆ ಎಂದು ಆರೋಪಿಸಿದರು. ಕೇಂದ್ರ-ರಾಜ್ಯ ಸರಕಾರಗಳ ಜನಪ್ರಿಯ ಯೋಜನೆಗಳಿಂದ ಜಿಲ್ಲೆಯ ಬಹುತೇಕ ರೈತಾಪಿ ವರ್ಗದವರು ವಂಚಿತರಾ ಗುತ್ತಿದ್ದಾರೆ. ಇದರಿಂದಾಗಿ ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಪರದಾಡುವಂತಾಗಿದೆ.

ಸರಕಾರದ ಪ್ರತಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ವೈಯಕ್ತಿಕ ಪಹಣಿಯ ಅಗತ್ಯವಿದೆ. ಆದರೆ, ಜಿಲ್ಲೆಯ ಬಹುತೇಕ ಬೆಳೆಗಾರರು ಜಂಟಿ ಪಹಣಿ ಪತ್ರ ಹೊಂದಿದ್ದಾರೆ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರು ಸರಕಾರ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ವೈಯಕ್ತಿಕ ಪಹಣಿ ಲಭ್ಯವಾಗದ ಹಿನ್ನೆಲೆ ಬಡ ರೈತಾಪಿ ವರ್ಗದವರಿಗೆ ಸಹಕಾರಿ ಕ್ಷೇತ್ರದಲ್ಲಿ ಸಾಲವೇ ಸಿಗುತ್ತಿಲ್ಲ. ಇನ್ನು ಸಾಲ ಮನ್ನಾದ ಮಾತೆಲ್ಲಿ ಎಂದು ಪ್ರಶ್ನಿಸಿದರು.

ಸಮಸ್ಯೆಯು ಜಿಲ್ಲಾ ವ್ಯಾಪಿ ಯಾಗಿದೆ. ಈ ಹಿನ್ನೆಲೆ ಸಮಸ್ಯೆಯ ಸಕರಾತ್ಮಕವಾಗಿ ಪರಿಹರಿಸಲು ವಿಚಾರವನ್ನು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿಯೂ ಪ್ರಸ್ತಾಪಿಸಬೇಕು. ಜಿಲ್ಲೆಯ ರೈತಾಪಿ ವರ್ಗದವರ ಪರವಾಗಿ ಮಡಿಕೇರಿ ತಾಲೂಕು ಪಂಚಾಯಿತಿಯಲ್ಲಿ ಶೋಭಾ ಮೋಹನ್ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಮುರುಳಿ ಕರುಂಬಮಯ್ಯ ವೈಯಕ್ತಿಕ ಆರ್‍ಟಿಸಿ ವಿಚಾರವನ್ನು ಪ್ರಸ್ತಾಪಿಸುವಂತೆ ರವಿ ಸಭೆಯ ಪರವಾಗಿ ಮನವಿ ಮಾಡಿದರು. ಈ ಬಗ್ಗೆಗಿನ ಸಭಾ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಪಂಚಾಯಿತಿ ಅಧ್ಯಕ್ಷರನ್ನು ಸಭೆ ಆಗ್ರಹಿಸಿತು.

ಗ್ರಾಮದಲ್ಲಿ ಗ್ರಾಮಲೆಕ್ಕಿಗರು: ಜನತೆಯ ಸೇವೆಗಾಗಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಲೆಕ್ಕಿಗರು ಲಭ್ಯರಿರಬೇಕು. ಹೊದ್ದೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರಿಗೆ ಕಚೇರಿಯ ವ್ಯವಸ್ಥೆ ಕಲ್ಪಿಸಬೇಕು. ವಾರವಿಡೀ ಅವರು ಅಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ಒಕ್ಕೊರಲ ಆಗ್ರಹ ಕೇಳಿ ಬಂತು. ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಲ್ಲಿ ತಾವು ಕರ್ತವ್ಯ ನಿರ್ವಹಿಸಲು ಸಿದ್ಧವೆಂದು ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ್ ಮಾರ್ನುಡಿದರು.

ಪಾಲೇಮಾಡುವಿಗೆ ಮೂಲಭೂತ ಸಮಸ್ಯೆಗಳ ಸಕಾಲಿಕ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಹೆಚ್.ಕೆ. ಮೊಣ್ಣಪ್ಪ ಆಗ್ರಹಿಸಿದರು. ವಾಟೇಕಾಡುವಿನ ಮಾಜಿ ಸೈನಿಕ ವಿ.ಎನ್. ಸುಬ್ರಮಣಿ ಮತ್ತು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಬಿ.ಎಂ. ಹಮೀದ್ ಪ್ರತ್ಯೇಕ ಸಮುದಾಯ ಭವನಗಳನ್ನು ಕ್ರಮವಾಗಿ ವಾಟೇಕಾಡು ಮತ್ತು ಕಬಡಕೇರಿಯಲ್ಲಿ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಿರ್ ತಳಿಯ ಕರುಗಳು: ಪಶು ಸಂಗೋಪನಾ ಇಲಾಖೆಯ ವೈದ್ಯೆ ಡಾ. ಶಿಲ್ಪಾ ಮಾತನಾಡಿ, ಜನತೆಯ ಬೇಡಿಕೆಗನುಸಾರ ಗುಜರಾತ್‍ನ ಹೆÉಸರಾಂತ ಗಿರ್ ತಳಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೃತಕ ಗರ್ಭಧಾರಣೆಯ ಫಲವಾಗಿ ಜಿಲ್ಲೆಯಲ್ಲಿ ಗಿರ್ ಕರುಗಳು ಜನಿಸಿವೆ ಎಂದು ನುಡಿದರು. ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿ ವರ್ಗದವರು ಆಯಾ ಇಲಾಖೆಗಳಿಂದ ಜನತೆಗೆ ದೊರೆಯುವ ಸೌಲಭ್ಯಗಳ ವಿವರವಿತ್ತರು. ತೋಟಗಾರಿಕೆ, ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

ಪ್ರಕೃತಿ ವಿಕೋಪದ ಸಂದರ್ಭ ಅತ್ಯುತ್ತಮ ಸೇವೆ ಸಲ್ಲಿಸಿದ ಹೊದ್ದೂರು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಮತ್ತು ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪ್ರಕೃತಿ ವಿಕೋಪ ನಡೆದ ಸಂದರ್ಭ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಶಿಕ್ಷಣ, ಪೊಲೀಸ್, ಸೆಸ್ಕ್, ಆರೋಗ್ಯ ಇಲಾಖೆ ಮತ್ತು ಸ್ಕೌಟ್ ಮತ್ತು ಗೈಡ್ ಕೆಡೆಟ್‍ಗಳಿಗೆ ಸ್ಮರಣಿಕೆ ಗಳನ್ನು ನೀಡಿ ಗೌರವಿಸಲಾಯಿತು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್ ಹಿಂದಿನ ಗ್ರಾಮಸಭೆಯ ವರದಿ ವಾಚಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ ಕರುಂಬಮಯ್ಯ, ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಎ. ಕುಸುಮಾವತಿ, ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.