ಮಡಿಕೇರಿ, ಅ.12 : ಅರಣ್ಯ ಇಲಾಖೆಯ ಕೊಡಗು ವೃತ್ತದ ವತಿಯಿಂದ ‘ನಮ್ಮ ನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’ ಎಂಬ ಕೇಂದ್ರ ವಿಷಯದಡಿ 65 ನೇ ವನ್ಯಜೀವಿ ಸಪ್ತಾಹ -2019 ಹಾಗೂ ಪರಿಸರ ಜಾಗೃತಿ ಆಂದೋಲನದ ಅಂಗವಾಗಿ ಪಶ್ಚಿಮಘಟ್ಟದ ಸಾಲಿನ ಕೊಡಗಿನ ಪ್ರಮುಖ ಪ್ರಾಕೃತಿಕ ಸೌಂದರ್ಯದ ನೆಲೆವೀಡಾದ ಪುಷ್ಪಗಿರಿ ಅಭಯಾರಣ್ಯದ ಮಾಂದಲ್‍ಪಟ್ಟಿ ಗಿರಿಧಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು, ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಕುಶಾಲನಗರ ಅರಣ್ಯ ರಕ್ಷಕರ ತರಬೇತಿ ಕೇಂದ್ರ, ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ರಾಷ್ಟ್ರೀಯ ಹಸಿರುಪಡೆಯ ಶಾಲೆಗಳ ಇಕೋ ಕ್ಲಬ್‍ನ ಶಿಕ್ಷಕರು, ಡಬ್ಲ್ಯೂ. ಜಿ.ಎನ್.ಎಫ್. ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಗಿರಿಧಾಮವನ್ನು ಸ್ವಚ್ಛಗೊಳಿಸಿದರು.
ಮಾಂದಲ್‍ಪಟ್ಟಿ ಗಿರಿಧಾಮಕ್ಕೆ ತೆರಳುವ ದಾರಿಯಲ್ಲಿ ಸ್ವಯಂ ಸೇವಕರು ಮೂರು ಕಿ.ಮೀ. ದೂರ ನಡೆದು ಪ್ರವಾಸಿಗಳು ಅಲ್ಲಲ್ಲಿ ಬಿಸಾಕಿದ್ದ ಗಾಜು ಮತ್ತು ಪ್ಲಾಸ್ಟಿಕ್ ಬಾಟಲ್‍ಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮತ್ತಿತರ ಘನ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಗಿರಿಧಾಮದ ಪರಿಸರವನ್ನು ಸ್ವಚ್ಛಗೊಳಿಸಿದರು.
ಕೊಡಗು ಅರಣ್ಯ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಎಸ್.ಆರ್.ನಟೇಶ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಎಸಿಫ್‍ಗಳಾದ ನೀಲೇಶ್ ಸಿಂಧೆ, ಡಿ.ಎಸ್. ದಯಾನಂದ, ಪುಷ್ಪಗಿರಿ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಶ್ರೀನಿವಾಸ್ ನಾಯಕ್, ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ, ಮಡಿಕೇರಿ ಮೆಡಿಕಲ್ ಕಾಲೇಜಿನ ನ್ಯಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ಉಮೇಶ್ ಬಾಬು, ಡಾ|| ನರಸಿಂಹ, ಆಡಳಿತಾಧಿಕಾರಿ ಮೋಹನ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ|| ಅನಿಲ್ ಕಸ್ಲೆ, ಡಿ.ಆರ್.ಎಫ್.ಗಳಾದ ಕೆ.ಎಂ. ಮರಿಸ್ವಾಮಿ, ಎಂ.ಕೇಶವ, ವೈ.ಕೆ.ಜಗದೀಶ್, ನಮನ್ ನಾಯಕ್, ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಡಬ್ಲ್ಯೂ. ಜಿ.ಎನ್.ಎಫ್. ಸಂಸ್ಥೆಯ ಮುಖ್ಯಸ್ಥ ಶಿವು, ಡಿ.ಆರ್.ಎಫ್.ಗಳು, ಅರಣ್ಯ ಸಿಬ್ಬಂದಿ, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು, ಅರಣ್ಯ ರಕ್ಷಕರ ತರಬೇತಿ ಕೇಂದ್ರದ ತರಬೇತಿದಾರರು, ವಿಜ್ಞಾನ ಪರಿಷತ್ತಿನ ಸದಸ್ಯರು, ಶಾಲಾ ಶಿಕ್ಷಕರು, ಪ್ರವಾಸಿಗರು ಸೇರಿದಂತೆ ನೂರಾರು ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ನಂತರ ಮಾಂದಲಪಟ್ಟಿಯ ವೀಕ್ಷಣಾ ಸ್ಥಳದ ಬಳಿ ಜೀವಿ ವೈವಿಧ್ಯ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‍ನ ಮುಖ್ಯ ನ್ಯಾಚುರಲಿಸ್ಟ್ ಎಸ್.ಕಾರ್ತಿಕೇಯನ್ ವನ್ಯಜೀವಿಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ಗಿರಿಧಾಮ ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಕೂಡ ತಮ್ಮನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಕಾರ್ಯ ಆರಂಭವಾಗುವ ವೇಳೆಗೆ ಗಿರಿಧಾಮದಲ್ಲಿ ಮಂಜು ಕವಿದಿತ್ತು. ನಯನ ಮನೋಹರ ದೃಶ್ಯ ವೈಭವಗಳ ಮೋಡಗಳಿಂದ ಕೂಡಿದ್ದ ಮಾಂದಲ್‍ಪಟ್ಟಿ ಗಿರಿಧಾಮದಲ್ಲಿ ಕೈಗೊಂಡ ಸ್ವಚ್ಛತಾ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು. ಮುಂದಿನ ದಿನಗಳಲ್ಲಿ ಈ ಗಿರಿಧಾಮವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಕಾಪಾಡುವ ಕುರಿತಂತೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಲಾಗುವದು ಎಂದು ಅರಣ್ಯಾಧಿಕಾರಿಗಳು ಈ ಸಂದರ್ಭ ತಿಳಿಸಿದ್ದಾರೆ.