ಮಡಿಕೇರಿ, ಅ. 12: ಮಡಿಕೇರಿ ದಸರಾ ಜನೋತ್ಸವ ಸಂದರ್ಭ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಡಿಕೇರಿ ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜೆ. ರವಿಗೌಡ, ಐತಿಹಾಸಿಕ ಮಡಿಕೇರಿ ದಸರಾಕ್ಕೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು. ಆದರೆ ಇವರಿಗೆ ಅಗತ್ಯವಾಗಿ ಬೇಕಾಗಿದ್ದ ಕುಡಿಯುವ ನೀರು, ಶೌಚಾಲಯ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ದಸರಾ ಪೂರ್ವಭಾವಿ ಸಭೆಯಲ್ಲಿ ಮೊಬೈಲ್ ಶೌಚಾಲಯ ಕಲ್ಪಿಸುವ ಕುರಿತು ಚರ್ಚಿಸಲಾಗಿತ್ತು. ಆದರೆ ಯಾವದೇ ಪ್ರಸ್ತಾಪಗಳು ಕಾರ್ಯರೂಪಕ್ಕೆ ಬಂದಿಲ್ಲ, ದಸರಾಕ್ಕೆ ಆಗಮಿಸಿದ ಮಹಿಳೆಯರು ಹಾಗೂ ಮಕ್ಕಳು ಅಗತ್ಯ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕೆಲವು ಬಡಾವಣೆ, ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಸಾರ್ವಜನಿಕರು ಭಯದ ವಾತಾವರಣದಲ್ಲಿ ಸಾಗುವಂತಾಯಿತು. ಯುವ ದಸರಾ ಸಂದರ್ಭ ಬಂದ ಮಳೆಯಿಂದ ನಗರದ ಗಾಂಧಿ ಮೈದಾನ ಕೆಸರುಮಯವಾಗಿತ್ತು. ಈ ಕುರಿತು ನಗರಸಭೆಯ ಆಯುಕ್ತರ ಗಮನಕ್ಕೆ ತರಲಾಗಿತ್ತು. ಆದರೆ ಆಯುಕ್ತರು ತಕ್ಷಣ ಸ್ಪಂದಿಸದೆ ಆಯುಧ ಪೂಜೆಯ ದಿನ ಎಂ ಸ್ಯಾಂಡ್ ಹಾಕಿ ದುರಸ್ತಿ ಕಾರ್ಯ ನಡೆಸಿದ್ದರು. ಇದನ್ನು ಮೊದಲೇ ಮಾಡದೆ ಪ್ರೇಕ್ಷಕರನ್ನು ಪರೀಕ್ಷೆ ಮಾಡಿದ್ದಾರೆ ಎಂದು ಆರೋಪಿಸಿದರು.
ಶೋಭಾಯಾತ್ರೆ ಗೊಂದಲ: ದಸರಾ ಶೋಭಾಯಾತ್ರೆ ಸಂದರ್ಭ ಬಹುಮಾನ ವಿತರಣೆಯಲ್ಲಾದ ಗೊಂದಲದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, ತೀರ್ಪುಗಾರಿಕೆಯ ಮೊದಲೇ ಯಾವ ಯಾವ ಮಂಟಪಕ್ಕೆ ಬಹುಮಾನ ನೀಡಬೇಕೆಂದು ಮೊದಲೇ ನಿರ್ಧರಿಸಿದಂತಿದೆ ಎಂಬ ಸಂಶಯ ಜನರಲ್ಲಿ ಮೂಡಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ಗೊಂದಲಕ್ಕೆ ದಶಮಂಟಪ ಸಮಿತಿ ಅಧ್ಯಕ್ಷರು ತೆರೆ ಎಳೆಯಬೇಕು ಎಂದು ರವಿಗೌಡ ಒತ್ತಾಯಿಸಿದರು.
ಈ ಹಿಂದೆ ತೀರ್ಪುಗಾರರು ತಮ್ಮ ತೀರ್ಪನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ದಶಮಂಟಪದ ಅಧ್ಯಕ್ಷರಿಗೆ ನೀಡುತ್ತಿದ್ದರು. ಆದರೆ ಈ ಬಾರಿ ತೆರೆದ ಪ್ರತಿಯನ್ನು ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿ ತೀರ್ಪುಗಾರರು ಮಂಟಪಗಳಿಗೆ ನೀಡಿರುವ ಅಂಕಗಳನ್ನು ಬಹಿರಂಗಪಡಿಸಬೇಕೆಂದು ಅವರು ಆಗ್ರಹಿಸಿದರು.
ಕಾರ್ಯಕ್ರಮದಲ್ಲೂ ರಾಜಕೀಯ: ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಮಾತನಾಡಿ, ಪ್ರಸಕ್ತ ಸಾಲಿನ ಮಡಿಕೇರಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ನುಸುಳಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಹಿತರಕ್ಷಣಾ ವೇದಿಕೆಯ ಸದಸ್ಯರಾದ ನಾಗೇಶ್ ಜೋಡುಪಾಲ, ಸಮೀರ್ ಮಡಿಕೇರಿ, ಮಂಜುಳಾ ಧರ್ಮ ಹಾಗೂ ಲಿಲ್ಲಿ ರವಿಗೌಡ ಉಪಸ್ಥಿತರಿದ್ದರು.