ಸೋಮವಾರಪೇಟೆ, ಅ. 12: ಇಲ್ಲಿನ ಕ್ಲಬ್ ರಸ್ತೆಯ ಕಟ್ಟಡದಲ್ಲಿ ನೂತನವಾಗಿ ತೆರೆಯಲಾದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‍ನ ಕಚೇರಿಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೃಷಿ ಕ್ಷೇತ್ರದತ್ತ ಯುವ ಜನಾಂಗ ಆಸಕ್ತಿ ಕಳೆದುಕೊಳ್ಳುತ್ತಿರುವದು ದುರಂತ. ಕೃಷಿ ಕ್ಷೇತ್ರದ ಬೆಳವಣಿಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕೃಷಿಯಿಂದ ವಾತಾವರಣದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ರೈತರು ಮತ್ತು ಬೆಳೆಗಾರರು ಪ್ರಕೃತಿಯ ಉಳಿವಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಯಾರೂ ಸಹ ತಮ್ಮ ಕೃಷಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಬಾರದು ಎಂದು ಕಿವಿಮಾತು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್‍ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ವಹಿಸಿ ಮಾತನಾಡಿ, ಕೃಷಿ ಕ್ಷೇತ್ರದತ್ತ ಆಸಕ್ತಿ ಮೂಡಿಸುವ ಕಾರ್ಯವನ್ನು ನಮ್ಮ ಸಂಸ್ಥೆಯ ವತಿಯಿಂದ ಮಾಡಲಾಗುತ್ತಿದೆ. ಈಗಾಗಲೇ ಗದ್ದೆ ನಾಟಿಯ ಬಗ್ಗೆ ಬೆಂಗಳೂರಿನ ಯುವಜನಾಂಗಕ್ಕೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗಿದೆ. ಮುಂದೆಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕಾಫಿ ಮಂಡಳಿಯ ಅಧಿಕಾರಿ ಲಕ್ಷ್ಮೀಕಾಂತ್ ಎನ್.ಎಂ., ಮಲೆನಾಡು ಯೂತ್ ಅಸೋಸಿಯೇಷನ್ ಅಧ್ಯಕ್ಷ ಯಶ್ವಂತ್ ಗೌಡ, ರಾಮ ಕಾಂಪ್ಲೆಕ್ಸ್‍ನ ಮಾಲೀಕ ವೀರಪ್ಪ ಕೆ.ಡಿ. ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ವಿನಯ್‍ಕುಶಾಲಪ್ಪ, ರಕ್ಷಿತ್ ಕೆ.ಪಿ., ಅಬಿಷೇಕ್ ಗೋವಿಂದಪ್ಪ, ಆದರ್ಶ್ ತಮ್ಮಯ್ಯ, ವಿಕಾಸ್ ಕೆ.ವಿ., ಪ್ರಜಾ ಪೂಣಚ್ಚ, ರಾಕೇಶ್ ಪಟೇಲ್ ಸೇರಿದಂತೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.