ಕುಶಾಲನಗರ, ಅ. 12: ಕಾವೇರಿ ಪರಿಸರ ರಕ್ಷಣಾ ಬಳಗ ಮತ್ತು ಕುಶಾಲನಗರ ಮಾಜಿ ಸೈನಿಕರ ಸಂಘ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಬಸ್ ನಿಲ್ದಾಣ ಆವರಣ ಸ್ವಚ್ಛತಾ ಕಾರ್ಯ ನಡೆಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದ್ವಿಚಕ್ರ ಮತ್ತು ಕಾರು ನಿಲುಗಡೆ ಆವರಣದ ತ್ಯಾಜ್ಯ ಗಳನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಕೆ.ಎಂ. ಬೋಜಪ್ಪ ಅವರು ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಮತ್ತು ಜಲಮೂಲಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮನೆ ಮನೆಯಿಂದ ಸ್ವಚ್ಛತೆಯ ಕಾಳಜಿ ಪ್ರಾರಂಭವಾಗುವ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ ಎಂದರು. ಈ ಸಂದರ್ಭ ಮಾತನಾಡಿದ ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕುಶಾಲನಗರ ಪಟ್ಟಣವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಬಳಗದ ಸದಸ್ಯರು ವಿವಿಧ ಸಂಘಸಂಸ್ಥೆಗಳು ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಇದುವರೆಗೆ ಸಾವಿರಾರು ಸಂಖ್ಯೆಯ ಗಿಡಗಳನ್ನು ನೆಟ್ಟು ಬೆಳೆಸುವದರೊಂದಿಗೆ ಮರಗಳ ನಿರ್ವಹಣೆ ಕೂಡ ಮಾಡಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಅರಿವು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭ ಬಸ್ ನಿಲ್ದಾಣ ಆವರಣದಲ್ಲಿ ಬಳಗದ ವತಿಯಿಂದ ಪ್ರಯಾಣಿಕರ ಅನುಕೂಲಕ್ಕೆ ಸಿಮೆಂಟ್ ಬೆಂಚ್ ಅಳವಡಿಸಲಾಯಿತು. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಎಸ್.ಆರ್. ಮಾದಪ್ಪ, ಖಜಾಂಚಿ ಎನ್.ಎಸ್. ನರೇಶ್ ಕುಮಾರ್, ನಿವೃತ್ತ ಅರಣ್ಯಾಧಿಕಾರಿಗಳಾದ ಎಂ.ಎಸ್. ಚಿಣ್ಣಪ್ಪ, ಮಂಡೇಪಂಡ ಬೋಸ್ ಮೊಣ್ಣಪ್ಪ, ನಿವೃತ್ತ ಶಿಕ್ಷಕರಾದ ಎಂ.ಹೆಚ್. ನಜೀರ್ ಅಹಮ್ಮದ್, ಯುವಕ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಜೋಯಪ್ಪ, ಬಳಗದ ಪ್ರಮು ಖರಾದ ಡಿ.ಆರ್. ಸೋಮಶೇಖರ್, ಹಾ.ತಿ. ಜಯಪ್ರಕಾಶ್ ಮತ್ತು ಮಾಜಿ ಸೈನಿಕರ ಸಂಘದ ಸದಸ್ಯರು, ಬಳಗದ ಕಾರ್ಯಕರ್ತರು ಇದ್ದರು.