ಶ್ರೀಮಂಗಲ, ಅ. 13: ಕೊಡಗು ಜಿಲ್ಲೆಯ ಮಾಜಿ ಸೈನಿಕರ ಸಮಸ್ಯೆ ಪರಿಹರಿಸಿಕೊಳ್ಳಲು ಸಂಘಟಿತರಾಗಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಬೃಹತ್ ರ್ಯಾಲಿ ನಡೆಸಲು ಮತ್ತು ಮಾಜಿ ಸೈನಿಕರ ಸಮಸ್ಯೆ ಬಗೆಹರಿಸಲು ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲು ಮಾಜಿ ಸೈನಿಕರ ಸಂಘ ನಿರ್ಣಯ ಕೈಗೊಂಡಿದೆ.
ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಮಾಜಿ ಸೈನಿಕರ ರ್ಯಾಲಿಯನ್ನು ಎಲ್ಲಿ ನಡೆಸಬೇಕು ಹಾಗೂ ಯಾವ ಸಮಯದಲ್ಲಿ ನಡೆಸಬೇಕು ಎನ್ನುವ ಬಗ್ಗೆ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರೊಂದಿಗೆ ಚರ್ಚಿಸಿ ತೀರ್ಮಾನಿಸಲು ನಿರ್ಧರಿಸಲಾಯಿತು.
ಸಂಘದ ಅಧ್ಯಕ್ಷ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲೆಯ ಮಾಜಿ ಸೈನಿಕರು ಕಳೆದ 3-4 ದಶಕದಿಂದ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತಿದ್ದು, ಇದರ ಪರಿಹಾರಕ್ಕೆ ನಿರಂತರವಾಗಿ ಜಿಲ್ಲಾಡಳಿತ ಹಾಗೂ ಸರಕಾರದೊಂದಿಗೆ ವ್ಯವಹರಿಸು ತ್ತಿದ್ದರೂ ಮಾಜಿ ಸೈನಿಕರಿಗೆ ಸೂಕ್ತ ಸ್ಪಂದನ ಸಿಗುತ್ತಿಲ್ಲ. ಮಾಜಿ ಸೈನಿಕರು ಸೇನೆಯಲ್ಲಿ ದೇಶ ರಕ್ಷಣೆಗಾಗಿ ನಿವೃತ್ತಿಯವರೆಗೆ ಹೋರಾಟ ನಡೆಸಿದ್ದು, ನಿವೃತಿ ನಂತರ ತಮ್ಮ ಹಾಗೂ ತಮ್ಮ ಕುಟುಂಬದ ಬದುಕಿಗಾಗಿ ಜಿಲ್ಲೆಯಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮಾಜಿ ಸೈನಿಕರೊಬ್ಬರು 80 ಸೆಂಟು ಪೈಸಾರಿ ಜಾಗ ಒತ್ತುವರಿ ಮಾಡಿಕೊಂಡಿರು ವದನ್ನು ತೆರವುಗೊಳಿಸಿ ಅದನ್ನು ಅನಧಿಕೃತ ನೆರೆ ಸಂತ್ರಸ್ತರ ಪುನರ್ ವಸತಿಗೆ ಬಳಸಲು ಮುಂದಾಗಿದೆ. ಆದರೆ ನೂರಾರು ಎಕರೆ ಸರ್ಕಾರಿ ಜಾಗವನ್ನು ಆಂಧ್ರ, ತಮಿಳುನಾಡು, ಕೇರಳ ರಾಜ್ಯದವರು ಒತ್ತುವರಿ ಮಾಡಿಕೊಂಡಿರುವದನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಸಿಗುತ್ತಿಲ್ಲ, ಒತ್ತುವರಿ ಮಾಡಿ ಕೊಂಡಿರುವ ಜಾಗ ಮಂಜೂರಾತಿಗೂ ಸರ್ಕಾರ ಮುಂದಾ ಗುತ್ತಿಲ್ಲ. ಆದರೆ ಹೊರಗಿನವರಿಗೆ ಭ್ರಷ್ಟಾಚಾರದ ಮೂಲಕ ಸರ್ಕಾರಿ ಜಾಗ ದೊರೆಯುತ್ತಿದ್ದು, ಮಂಜೂರಾತಿ ಸಹ ಆಗುತ್ತಿದೆ. ಮಾಜಿ ಸೈನಿಕರ ಸಮಸ್ಯೆ ಬಗೆಹರಿಸಲು ಅದಾಲತ್ ಕರೆಯುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಮಾಜಿ ಸೈನಿಕರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಕಾರ್ಯಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಗೌರವ ಕಾರ್ಯದರ್ಶಿ ನಿವೃತ್ತ ಸೇನಾಧಿಕಾರಿ ಓ.ಎಸ್. ಚಿಂಗಪ್ಪ ಮಾತನಾಡಿ ಕಳೆದ ವರ್ಷ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಮಾಜಿ ಸೈನಿಕರಿಗೆ ¸ಂಘದಿಂದ ರೂ 3.50 ಲಕ್ಷ ಸಂಗ್ರಹಿಸಿ ನೆರವು ನೀಡಲಾಗಿದೆ. ಪಿಂಚಣಿ ಕಡಿಮೆ ಬರುತ್ತಿದ್ದರೆ ಈ ಬಗ್ಗೆ ಸಂಘದಲ್ಲಿ ವಿಚಾರಿಸಿ ತಿಳಿದುಕೊಳ್ಳಬೇಕು. ಸಂಘದೊಂದಿಗೆ ಮಾಜಿ ಸೈನಿಕರು ನಿರಂತರ ಸಂಪರ್ಕವಿಟ್ಟುಕೊಂಡು ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಪ್ರತೀ ಮಾಜಿ ಸೈನಿಕರು ಸಂಘದ ಸದಸ್ಯತ್ವ ಪಡೆದುಕೊಳ್ಳುವಂತೆ ಕರೆ ನೀಡಿದರು. ಮಾಜಿ ಸೈನಿಕರಿಗೆ ಈ ಹಿಂದೆ ಜಿಲ್ಲಾಧಿಕಾರಿ ಜಾಗ ಮಂಜೂರಾತಿ ಮಾಡುವ ಅಧಿಕಾರ ಹೊಂದಿದ್ದರು. ಆದರೆ ಈಗ ಈ ಅಧಿಕಾರ ಇಲ್ಲದಿರುವದರಿಂದ ಅಕ್ರಮ ಸಕ್ರಮ ಸಮಿತಿ ಮೂಲಕವೇ ವiಂಜೂರಾತಿ ಆಗಬೇಕಾಗಿದೆ. ಕಳೆದ ಹಲವು ವರ್ಷದಿಂದ ಅಕ್ರಮ ಸಕ್ರಮ ಸಮಿತಿ ಸರಿಯಾಗಿ ಕಾರ್ಯ ಚಟುವಟಿಕೆ ನಡೆಸದಿರುವದರಿಂದ 30-40 ವರ್ಷದ ಮಾಜಿ ಸೈನಿಕರ ಜಾಗ ವiಂಜೂರಾತಿ ಕಡತ ನೆನೆಗುದಿಗೆ ಬೀಳುವಂತಾಗಿದೆ ಎಂದರು.
ಸಭೆಯಲ್ಲಿ ಮಡಿಕೇರಿ ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕ ನಿವೃತ್ತ ಸುಬೇದಾರ್ ಸುಬ್ಬಯ್ಯ ಮಾತನಾಡಿ, ಕೊಡಗಿನ ದೂರದ ಊರಿನಿಂದ ಬರುವ ಮಾಜಿ ಸೈನಿಕರಿಗೆ ಎರಡು ತಿಂಗಳ ಕೋಟಾದ ಮದ್ಯ ನೀಡಲು ಮಾಜಿ ಸೈನಿಕರ ಬೇಡಿಕೆ ಇದೆ. ಆದರೆ ಈ ಬಗ್ಗೆ ನಮಗೆ ಯಾವದೇ ನಿರ್ದೇಶನ ಇಲ್ಲದಿರುವದರಿಂದ ಒಂದೇ ತಿಂಗಳ ಕೋಟಾವನ್ನು ನೀಡಲಾಗುತ್ತಿದೆ. ವೀರಾಜಪೇಟೆ ಆರ್ಮಿ ಕ್ಯಾಂಟೀನ್‍ನಲ್ಲಿ ಮದ್ಯ ವಿತರಣೆಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುತ್ತಿದ್ದು, ಒಂದೆರಡು ತಿಂಗಳಲ್ಲಿ ಇದರ ಬಗ್ಗೆ ಖಚಿತವಾದ ನಿರ್ಧಾರ ಹೊರ ಬೀಳಲಿದೆ ಎಂದು ಹೇಳಿದರು.
ವೀರಾಜಪೇಟೆ ಡೆಂಟಲ್ ಕಾಲೇಜಿನಿಂದ ಪಿಂಚಣಿ ಸೌಲಭ್ಯ ಇಲ್ಲದ ಮಾಜಿ ಸೈನಿಕರ ವಿಧವಾ ಪತ್ನಿಯರಿಗೆ ವೈದ್ಯಕೀಯ ಸೌಲಭ್ಯ ನೀಡಲು ಮುಂದಾಗಿದ್ದು, ಸೀಮಿತ ಸದಸ್ಯರಿಗೆ ಮಾತ್ರ ಅವಕಾಶವಿದೆ. ಈ ಬಗ್ಗೆ ಮಡಿಕೇರಿ ಆರ್ಮಿ ಕ್ಯಾಂಟೀನ್‍ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಮಂದಣ್ಣ ಮಾತನಾಡಿ, ಸಂಘದ ಸದಸ್ಯರಿಗೆ ಮರಣನಿಧಿ ಸೌಲಭ್ಯ ಅನುಷ್ಠಾನಗೊಳಿ ಸಬೇಕು. ಸದಸ್ಯತ್ವವನ್ನು ಪರಿಷ್ಕøತ ಗೊಳಿಸಬೇಕೆಂದು ಸಲಹೆ ನೀಡಿದರು.
ಬೆಳೆನಷ್ಟ ಪರಿಹಾರ ಹಾಗೂ ಸಾಲ ಮನ್ನಾ ಸೌಲಭ್ಯ ಮಾಜಿ ಸೈನಿಕರಿಗೂ ದೊರೆಯುವಂತಾಗ ಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ನಿವೃತ್ತ ಸೇನಾಧಿಕಾರಿ ಕರ್ನಲ್ ಚಿಣ್ಣಪ್ಪ, ಏರ್ ಕಮಾಂಡರ್ ದೇವಯ್ಯ, ಮೇಜರ್ ಮಂದಣ್ಣ, ಕರ್ನಲ್ ಗಣಪತಿ, ಕರ್ನಲ್ ಗಣೇಶ್, ಸುಬೇದಾರ್ ಮೇಜರ್ ಶಂಭು (ನಾಪೋಕ್ಲು ಸಂಘ) ಸುಬೇದಾರ್ ಈರಪ್ಪ (ಸೋಮವಾರಪೇಟೆ ಸಂಘ), ನಾಯಕ್ ಸುಬೇದಾರ್ ಎಂ.ಎನ್. ಮಾದಪ್ಪ (ಚೇರಂಬಾಣೆ ಸಂಘ) ಕಟ್ಟೇರ ವಿಶ್ವನಾಥ್ (ಟಿ-ಶೆಟ್ಟಿಗೇರಿ ಸಂಘ) ಐನಂಡ ಮಂದಣ್ಣ (ಪೊನ್ನಂಪೇಟೆ ಸಂಘ) ಪದ್ಮನಾಭ (ಕುಶಾಲನಗರ ಸಂಘ) ಧರ್ಮಪ್ಪ (ಶನಿವಾರಸಂತೆ ಸಂಘ) ಉಪಸ್ಥಿತರಿದ್ದರು.
ಚಿತ್ರ ವರದಿ: ಹರೀಶ್ ಮಾದಪ್ಪ