ಮಡಿಕೇರಿ, ಅ. 13 : ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಮಹತ್ವವನ್ನು ಸರ್ವರಿಗೂ ಸಾರುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆಯಿಂದ ಇಂದು ಆಯೋಜಿಸ ಲಾಗಿದ್ದ 65ನೇ ವನ್ಯಜೀವಿ ಸಪ್ತಾಹ-2019 ಗುಡ್ಡಗಾಡು ಓಟದ ಮೂಲಕ ನಗರದ ಅರಣ್ಯ ಭವನದಲ್ಲಿ ಸಮಾರೋಪಗೊಂಡಿತು.ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಪ್ರಮುಖ ವಿಜ್ಞಾನ ಶಿಕ್ಷಕ ಹಾಗೂ ಪರಿಸರವಾದಿ ಪ್ರೇಮ್‍ಕುಮಾರ್ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು. ಓಟದಲ್ಲಿ 2 ವಿಭಾಗಗಳಿದ್ದು 5 ಹಾಗೂ 10 ಕಿ.ಮೀ. ಕ್ರಮಿಸುವ ಸವಾಲು ಸ್ಪಧಿರ್üಗಳದ್ದಾಗಿತ್ತು. ಪ್ರೇಮ್‍ಕುಮಾರ್ ಅವರು ಮಾತನಾಡಿ ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸುವಂತೆ ಸೂಚಿಸಿದರು. ‘ಕಾಡು ಬೆಳೆಸಿ ನಾಡು ಉಳಿಸಿ’, ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಸಂದೇಶ ನೀಡುವ ಅನೇಕ ಜಾಗೃತಿ ಫಲಕಗಳನ್ನು ಸ್ಪರ್ಧಾರ್ಥಿಗಳು ಓಟದ ಮುನ್ನ ಪ್ರದರ್ಶಿಸಿದರು. ಪ್ರೇಮ್‍ಕುಮಾರ್ ಅವರ ಅನೇಕ ಪರಿಸರ ಪ್ರೇಮಿ ಘೋಷಣೆಗಳಿಗೆ ಹಾಜರಿದ್ದ ಎಲ್ಲರೂ ಪ್ರತಿಧ್ವನಿಸಿ ‘ಪ್ಲಾಸ್ಟಿಕ್ ಬಳಸುವ ಜಾಗದಲ್ಲಿ ಪರಿಸರ ಸ್ನೇಹಿ ಪದಾರ್ಥಗಳನ್ನು ಬಳಸುತ್ತೇನೆ, ಪರಿಸರದ ಉಳಿವಿಗಾಗಿ ಶ್ರಮಿಸುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಓಟಕ್ಕೆ ಚಾಲನೆ ನೀಡಲಾಯಿತು. ‘ಜಲವೇ ಜೀವ ಜಲ, ಬೈಸಿಕಲ್ ಬಳಸಿ, ಇಂಧನ ಉಳಿಸಿ’ ಎನ್ನುವ ಘೋಷಣೆÉಗಳು ಮೊಳಗಿದವು.
(ಮೊದಲ ಪುಟದಿಂದ)
5 ಕಿ.ಮೀ ಓಟದಲ್ಲಿ ಸುಮಾರು 100 ಮಂದಿ ಇದ್ದು, 10 ಕಿ.ಮೀ ಓಟದಲ್ಲಿ ಸುಮಾರು 60 ಮಂದಿ ಭಾಗವಹಿಸಿದರು. ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಕುಶಾಲನಗರದಲ್ಲಿ ತರಬೇತಿ ಪಡೆಯುತ್ತಿರುವ ಮಂದಿ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್, ಸಿಇಓ ಲಕ್ಷ್ಮೀಪ್ರಿಯ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಕೂಡ ಓಟದಲ್ಲಿ ಭಾಗವಹಿಸಿದರು.
5 ಕಿ.ಮೀ ಓಟದ ಮಾರ್ಗ ಅರಣ್ಯ ಭವನದಿಂದ ಪ್ರಾರಂಭ ಗೊಂಡು ಚೈನ್‍ಗೇಟ್, ಮಡಿಕೇರಿ ಮೀಸಲು ಅರಣ್ಯದ ಪಥ, ಇಬ್ನಿ ರೆಸಾರ್ಟ್ ತಲಪಿ ಅಲ್ಲಿಂದ ತಿರುಗಿ ಅರಣ್ಯ ಭವನದಲ್ಲಿ ಅಂತ್ಯಗೊಂಡರೆ, 10 ಕಿ.ಮೀ ಓಟದ ಮಾರ್ಗ ಇದೇ ದಾರಿಯಲ್ಲಿದ್ದು ಇಬ್ನಿ ರೆಸಾರ್ಟ್‍ನಿಂದ ಮೈಸೂರು ರಸ್ತೆ, ಸ್ಯಾಂಡಲ್ ಕಾಡು ಜಂಕ್ಷನ್ ತಲುಪಿ ಅರಣ್ಯ ಭವನದಲ್ಲಿ ಅಂತ್ಯಗೊಂಡಿತು.
ದಾರಿ ಮಧ್ಯೆ ಅಲ್ಲಲ್ಲಿ ಓಟಗಾರರಿಗೆ ಜಿಗಣೆ ಹಾವಳಿ ಎದುರಾದರೂ ಲೆಕ್ಕಿಸದೆ ಗುರಿ ಮುಟ್ಟಿದರು.
ಸ್ಪರ್ಧಿಗಳಿಗೆ ತಲಾ ಒಂದು ಕ್ಯಾಪ್ ಮತ್ತು ಟೀ ಶರ್ಟನ್ನು ಅರಣ್ಯ ಇಲಾಖೆಯಿಂದ ನೀಡಿದುದು ವಿಶೇಷವೆನಿಸಿತ್ತು. ಅಲ್ಲಲ್ಲಿ ಯಂತ್ರಗಳ ಮೂಲಕ ಓಟದ ದಾರಿಯನ್ನು ಸುಗಮಗೊಳಿಸುತ್ತಿದ್ದುದು ಕಂಡುಬಂದಿತು.
-ಪ್ರಜ್ವಲ್ ಜಿ.ಆರ್; ಲಕ್ಷ್ಮೀಶ್