ಸೋಮವಾರಪೇಟೆ,ಅ.13: ಜಿ.ಪಂ., ತಾಲೂಕು ಕೃಷಿ ಇಲಾಖೆ ವತಿಯಿಂದ ತಾ. 16ರಂದು ‘ಕೃಷಿ ಅಭಿಯಾನ-ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ತಾ. 14 ಮತ್ತು 15ರಂದು ಪ್ರಚಾರ ಕಾರ್ಯಕ್ರಮ ನಡೆಯಲಿದೆ.
ತಾ. 16ರಂದು ಪೂರ್ವಾಹ್ನ 11 ಗಂಟೆಗೆ ಅರೆಯೂರು ಗ್ರಾಮದ ಈಶ್ವರ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ವಹಿಸಲಿದ್ದಾರೆ.
ಕೃಷಿ ಇಲಾಖಾ ಜಂಟಿ ನಿರ್ದೇಶಕ ಡಾ. ಕೆ. ರಾಜು, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವಿಜ್ಞಾನಿಗಳೊಂದಿಗೆ ರೈತ ಸಂವಾದ ಆಯೋಜಿಸಲಾಗಿದ್ದು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ. ವೀರೇಂದ್ರಕುಮಾರ್, ಚೆಟ್ಟಳ್ಳಿಯ ಡಾ. ವೆಂಕಟರಮಣಪ್ಪ, ಮಡಿಕೇರಿಯ ಬೇಸಾಯ ತಜ್ಞರಾದ ಡಾ. ಬಸವಲಿಂಗಯ್ಯ, ತೋಟಗಾರಿಕಾ ತಜ್ಞರಾದ ಡಾ. ವಿದ್ಯಾಶ್ರೀ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.