ಮಡಿಕೇರಿ, ಅ. 13: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ವತಿಯಿಂದ ಸೋಮವಾರಪೇಟೆ ಪ್ರಮುಖ ಬೀದಿ ಗಳಲ್ಲಿ ವಿವಿಧ ತಂಬಾಕಿನ ಅಂಗಡಿಗಳ ಮೇಲೆ ಕೋಟ್ಪಾ ಕಾರ್ಯಾಚರಣೆ ನಡೆಯಿತು.

ಪಾನ್ ಶಾಪ್, ಹೊಟೇಲ್, ಕಿರಾಣಿ ಅಂಗಡಿಗಳ ಮೇಲೆ ಈ ತಂಡ ಕೋಟ್ಪಾ 2003ರ ದಾಳಿ ನಡೆಸಲಾಯಿತು. ಹೊಟೇಲ್, ಬಾರ್, ಅಂಗಡಿ ಮತ್ತು ಪಾನ್‍ಶಾಪ್‍ಗಳಲ್ಲಿ ಸೆಕ್ಷನ್ 4 (60x45) ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದು ನಿಷೇಧಿಸಲಾಗಿದೆ. ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಟ್ಕಾ ಪ್ಯಾಕೆಟ್‍ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವದು (ಸೆಕ್ಷನ್ 5) ಕಂಡುಬಂದು ಇದಕ್ಕೆ ಕಡಿವಾಣ ಹಾಕಲು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಲಾಗಿದೆ ಮತ್ತು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಲಾಯಿತು. 18 ವಯಸ್ಸಿನ ಒಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವದು ಅಪರಾಧ (ಸೆಕ್ಷನ್ 6ಎ) ಬಗ್ಗೆ ನಾಮಫಲಕ ಹಾಕುವದು ಕಡ್ಡಾಯವಾಗಿದೆ. ಸೆಕ್ಷನ್ 6(ಬಿ) (60x30) ಶಿಕ್ಷಣ ಸಂಸ್ಥೆಗಳ 100 ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಶಾಲೆ ಮತ್ತು ಕಾಲೇಜುಗಳ ಅವರಣದಿಂದ 100 ಗಜಗಳ ಅಂತರದ ಒಳಗಡೆ ಇರುವ ಅಂಗಡಿಗಳಿಗೆ ಕಾನೂನಿನ ಸಲಹೆ ಮತ್ತು ದಂಡ ವಿಧಿಸುವದರ ಮುಖಾಂತರ ತಂಬಾಕು ಮಾರಾಟವನ್ನು ತೆರವು ಗೊಳಿಸಲಾಯಿತು ಸೆಕ್ಷನ್-7 ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಪ್ಯಾಕುಗಳ ಮೇಲೆ ಶೇ. 85 ರಷ್ಟು ಆರೋಗ್ಯದ ಎಚ್ಚರಿಕೆ ಸಂದೇಶಗಳಿಲ್ಲದೆ ಮಾರಾಟ ಮಾಡುವದರ ಮೇಲೆ ನಿಷೇಧ.

ಯಾರಿಗೂ ಅಂಗಡಿ ಮುಂದೆ ಧೂಮಪಾನ ಮಾಡಲು ಅವಕಾಶ ನೀಡದೆ ಇರುವದು. ಬೆಂಕಿ ಪೊಟ್ಟಣ, ಲೈಟರ್ ಮುಂತಾದ ಧೂಮಪಾನಕ್ಕೆ ಉತ್ತೇಜಿಸುವ ವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಡಬಾರದು. ಅಂಗಡಿಯಲ್ಲಿ ಅಪ್ರಾಪ್ತ ವಯಸ್ಕರನ್ನು ಇರಿಸಿ ಕೊಳ್ಳುವದು ಅಪರಾಧ ಎಂದು ತಿಳಿಸಲಾಯಿತು. ಈ ದಾಳಿಯಲ್ಲಿ ಜಿಲ್ಲಾ ಸಲಹೆಗಾರರಾದ ಪುನೀತ ರಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತರಾದ ಆರ್. ಮಂಜುನಾಥ್ ಸೋಮವಾರಪೇಟೆ ಹಿರಿಯ ಪುರುಷ ಆರೋಗ್ಯ ಸಹಾಯಕರಾದ ಮಹೇಶ್ ಮತ್ತು ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು.