ಮಡಿಕೇರಿ ಅ.11 : ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಂಬಂಧಿಗೆ ಸೇರಿದ ಹರ್ಷ ಶುಗರ್ಸ್‍ಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಯಾವದೇ ಹಣಕಾಸು ನೆರವು ನೀಡಿಲ್ಲ. ಕೊಡಗಿನ ರೈತರ ಹಿತವನ್ನು ಬಲಿಕೊಡುವ ಕಾರ್ಯಕ್ಕೆ ಬ್ಯಾಂಕ್ ಆಡಳಿತ ಮಂಡಳಿ ಕೈಹಾಕಿಲ್ಲ ಎಂದು ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸ್ಪಷ್ಟ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಂಬಂಧಿಕರಿಗೆ ಸೇರಿದ ಹರ್ಷ ಶುಗರ್ಸ್‍ಗೆ ನಿಯಮ ಮೀರಿ ಕೋಟ್ಯಾಂತರ ರೂ. ಸಾಲ ನೀಡಲಾಗಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು. ಹರ್ಷ ಶುಗರ್ಸ್‍ಗೆ ಸಾಲ ನೀಡುವಂತೆ 2014-15ನೇ ಸಾಲಿನಲ್ಲಿ ಮೌಖಿಕ ಬೇಡಿಕೆ ಬಂದಿತ್ತು. ಆದರೆ ಬ್ಯಾಂಕ್‍ನ ನಿಯಮ ಪ್ರಕಾರ ಹೊರ ಜಿಲ್ಲೆಗೆ ಸಾಲ ನೀಡಲು ಸಾಧ್ಯವಿಲ್ಲ ಎಂಬ ಕಾರಣದಿಂದ ಆ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ಆ ಸಂಸ್ಥೆಯ ನಡುವೆ ಯಾವದೇ ಪತ್ರವ್ಯವಹಾರ ಕೂಡ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.ಆ ನಂತರದ ದಿನಗಳಲ್ಲಿ ಸಹಕಾರ ಕಾಯ್ದೆಯ ನಿಯಮ 25ಸಿ ಅಡಿಯಲ್ಲಿ ಬ್ಯಾಂಕ್‍ನ ನಿಯಮಾವಳಿಗೆ ತಿದ್ದುಪಡಿ ತಂದು ಹೊರ (ಮೊದಲ ಪುಟದಿಂದ) ಜಿಲ್ಲೆಯ ಸಂಸ್ಥೆಗಳಿಗೆ ಸಾಲ ನೀಡುವ ಅವಕಾಶ ವನ್ನು ಮಾಡಿಕೊಳ್ಳಲಾಗಿದೆಯಾದರೂ, ಬ್ಯಾಂಕ್ ಸ್ವತಂತ್ರವಾಗಿ ಹೊರ ಜಿಲ್ಲೆಯ ಸಂಸ್ಥೆಗಳಿಗೆ ಸಾಲ ನೀಡಿಲ್ಲ. ಆದರೆ ಅಪೆಕ್ಸ್ ಬ್ಯಾಂಕ್‍ನ ನಾಯಕತ್ವದ ಸಮೂಹ ಬ್ಯಾಂಕ್ ಸಮಿತಿ ಶಿಫಾರಸ್ಸಿನ ಮೇರೆಗೆ ಬಾಗಲಕೋಟೆ ಜಿಲ್ಲೆಯ ಸವರಿನ್ ಇಂಡಸ್ಟ್ರೀಸ್‍ಗೆ 2015ರಲ್ಲಿ ಸುಮಾರು 8.68 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್‍ಗೆ 9.85 ಕೋಟಿ ರೂ.ಗಳ ಸಾಲ ನೀಡಲಾಗಿದೆ. ಈ ಪೈಕಿ ಸವರಿನ್ ಇಂಡಸ್ಟ್ರೀಸ್ ಇದುವರೆಗೆ ಅಸಲಿನ ಜೊತೆಗೆ ಸುಮಾರು 1.56 ಕೋಟಿ ರೂ.ಗಳ ಬಡ್ಡಿಯನ್ನೂ ಕಟ್ಟದೆ ‘ಡಿಫಾಲ್ಟರ್’ ಆಗಿದ್ದು, ಈ ಮೊತ್ತವನ್ನು ವಸೂಲು ಮಾಡಲು ಕಾನೂನಿನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬಾಂಡ್ ಗಣಪತಿ ತಿಳಿಸಿದರು.
ಕಣಚೂರು ಎಜುಕೇಷನ್ ಟ್ರಸ್ಟ್ ಅಸಲು ಮತ್ತು ಬಡ್ಡಿಯನ್ನು ಸಕಾಲದಲ್ಲಿ ಮರುಪಾವತಿ ಮಾಡುತ್ತಾ ಬರುತ್ತಿದ್ದು, ಹೊರ ಜಿಲ್ಲೆಗಳಿಗೆ ನೀಡಿದ ಸಾಲದ ವಸೂಲಾತಿಯ ಹೊಣೆ ಅಪೆಕ್ಸ್ ಬ್ಯಾಂಕ್ ಹಾಗೂ ಆಯಾ ಜಿಲ್ಲೆಗಳ ಸಹಕಾರ ಕೇಂದ್ರ ಬ್ಯಾಂಕ್‍ಗಳದ್ದಾ ಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್‍ನ ಬೈಲಾ ತಿದ್ದುಪಡಿಯ ಬಳಿಕ 2014ರಲ್ಲಿ ಪ್ರಥಮ ಬಾರಿಗೆ ಹೊರ ಜಿಲ್ಲೆಗಳಿಗೆ ಸಾಲ ನೀಡಲಾಗಿದೆಯಾದರೂ, ಆನಂತರದ ದಿನಗಳಲ್ಲಿ ಯಾವದೇ ಸಾಲ ನೀಡಿಲ್ಲ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ನಡೆದ ಮಹಾಸಭೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಮೀರಿ ಹೊರ ಜಿಲ್ಲೆಗಳಿಗೆ ಸಾಲ ನೀಡದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗೆ ಹೊರ ಜಿಲ್ಲೆಗಳಿಗೆ 20 ಕೋಟಿವರೆಗೆ ಸಾಲ ನೀಡಲು ಮಾತ್ರ ಅವಕಾಶವಿದ್ದು, ಹೀಗಿರುವಾಗ ಹರ್ಷ ಶುಗರ್ಸ್‍ಗೆ 40 ಕೋಟಿ ರೂ. ಸಾಲ ನೀಡಲಾಗಿದೆ ಎಂಬ ಆರೋಪದಲ್ಲಿ ಯಾವದೇ ಹುರುಳಿಲ್ಲ. ದೃಶ್ಯ ಮಾಧ್ಯಮವೊಂದು ತನ್ನ ಬಳಿ ಈ ಬಗ್ಗೆ ದಾಖಲೆ ಇರುವದಾಗಿ ಹೇಳಿದೆಯಾದರೂ, ಆ ದಾಖಲೆ ಸಹಕಾರ ಇಲಾಖೆಯಿಂದ ಪಡೆಯ ಲಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್ ನೀಡಿರುವ ಸಾಲದ ವಿವರವನ್ನು ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಎಂದು ತಿದ್ದಿರುವುದು ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕನೂ ಆಗಿರುವ ತನ್ನ ಗಮನಕ್ಕೆ ಬಂದಿದೆ ಎಂದು ಬಾಂಡ್ ಗಣಪತಿ ಹೇಳಿದರು.
ಗೋಷ್ಠಿಯಲ್ಲಿ ಹಾಜರಿದ್ದ ಬ್ಯಾಂಕ್‍ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರು ಮಾತನಾಡಿ, ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಬಂದಿರುವ ವರದಿಯಿಂದ ಬ್ಯಾಂಕ್‍ನ ಗ್ರಾಹಕರು ಬ್ಯಾಂಕ್‍ನ ಬಗ್ಗೆ ಸಂಶಯ ಪಡುವಂತಾಗಿದೆ. ಆದರೆ ಗ್ರಾಹಕರು ಯಾವದೇ ಗೊಂದಲಗಳಿಗೆ ಒಳಗಾಗಬೇಕಾಗಿಲ್ಲ. ಕೊಡಗಿನ ರೈತರ ಮತ್ತು ಬ್ಯಾಂಕ್‍ನ ಗ್ರಾಹಕರ ಹಿತವನ್ನು ಬಲಿಕೊಡುವ ಯಾವದೇ ಕಾರ್ಯಕ್ಕೆ ಬ್ಯಾಂಕ್‍ನ ಆಡಳಿತ ಮಂಡಳಿ ಕೈಹಾಕುವದಿಲ್ಲ ಎಂದು ಸ್ಪಷ್ಟಪಡಿಸಿ ದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ನಿರ್ದೇಶಕ ಕನ್ನಂಡ ಸಂಪತ್, ಪ್ರಧಾನ ವ್ಯವಸ್ಥಾಪಕ ಎಂ.ಕೆ.ಮೋಹನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಗಿರೀಶ್‍ಕುಮಾರ್ ಹಾಗೂ ಗಣಪತಿ ಅವರುಗಳು ಉಪಸ್ಥಿತರಿದ್ದರು.