ಕೂಡಿಗೆ, ಅ. 11: ಕ್ರೀಡೆಯು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳೊಂದಿಗೆ ಮೂಲಕ ಕ್ರೀಡೆಯನ್ನು ಪ್ರೇರೇಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಯೂನಿಕ್ ಅಕಾಡೆಮಿ, ಕೂಡ್ಲೂರಿನ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಡಯಟ್ ಮೈದಾನದಲ್ಲಿ ನಡೆದ 2019-20ನೇ ಸಾಲಿನ ಎಂಟು ಜಿಲ್ಲೆಗಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮೈಸೂರು ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸದೃಢ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಮುಖ್ಯ ಪಾತ್ರ ವಹಿಸುತ್ತದೆ. ಸಾಧನೆಗೆ ಗುರು ಹಿರಿಯರ ಮಾರ್ಗದರ್ಶನದ ಮೂಲಕ ಸಾಗಿದಲ್ಲಿ ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಯ ತವರೂರಾಗಿದೆ. ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದ ಈ ಜಿಲ್ಲೆಯಲ್ಲಿ ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಆತಿಥ್ಯವನ್ನು ಶಿಕ್ಷಣ ಇಲಾಖೆ ವಹಿಸಿಕೊಂಡಿದೆ. ವಿದ್ಯಾರ್ಥಿಗಳು ಕ್ರೀಡಾಮನೋಭಾವದೊಂದಿಗೆ ಸೋಲು, ಗೆಲವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಪ್ರತಿಭೆಯನ್ನು ಮೆರೆಯಬೇಕು ಎಂದರು.
ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ತಾ.ಪಂ. ಸದಸ್ಯ ಗಣೇಶ್, ಕ್ರೀಡೆಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಂಯಮವನ್ನು ಕಲಿಸುವದರ ಜೊತೆಗೆ ತನ್ನ ವೈಯಕ್ತಿಕ ಬದುಕಿಗೆ ದಾರಿಯಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೂಡಿಗೆ ಡಯಟ್ ನ ಪ್ರಾಂಶುಪಾಲ ಎಸ್.ಟಿ. ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್, ಯೂನಿಕ್ ಸಂಸ್ಥೆಯ ಅಧ್ಯಕ್ಷ ರವಿ ತೊರೆನೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್, ಡಾ. ಸದಾಶಿವಯ್ಯ ಪಲ್ಲೇದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕೂಡಿಗೆ ಗೋಲ್ಡನ್ ಈಗಲ್ ಕ್ಲಬ್‍ನ ಅಧ್ಯಕ್ಷ ದಿಲೀಪ್, ಯೂನಿಕ್ ಸಂಸ್ಥೆಯ ಕಾರ್ಯಪಾಲಕರಾದ ಎ.ಎಸ್. ಸುಪ್ರಿತ, ಮುಖ್ಯ ಶಿಕ್ಷಕಿ ನೇತ್ರಾವತಿ, ಕೂಡಿಗೆ ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಪ್ರಕಾಶ್ ಸೇರಿದಂತೆ ಮೂರು ತಾಲೂಕಿನ ದೈಹಿಕ ಶಿಕ್ಷಕರ ಅಧ್ಯಕ್ಷರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಮೈಸೂರು ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ 14 ರಿಂದ 17ರ ವಯೋಮಿತಿಯ ಬಾಲಕ ಬಾಲಕಿಯರ ಎಂಟು ಜಿಲ್ಲೆಯ 32 ತಂಡಗಳು ಭಾಗವಹಿಸಿದ್ದವು. ಕೊಡಗು, ಮೈಸೂರು, ಚಾಮರಾಜ ನಗರ, ಚಿಕ್ಕಮಗಳೂರು, ಹಾಸನ, ಉಡುಪಿ, ಮಂಡ್ಯ, ದ.ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಪಥಸಂಚಲನದಲ್ಲಿ ಪಾಲ್ಗೊಂಡು ಧ್ವಜ ವಂದನೆ ಸಲ್ಲಿಸಿದರು.