ಮಡಿಕೇರಿ, ಅ.11: ರಾಷ್ಟ್ರದ 25 ಜಿಲ್ಲಾ ವ್ಯಾಪ್ತಿಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೇಂದ್ರೀಯ ವಿದ್ಯಾಲಯ ಕಟ್ಟಡವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಕರಿಯಾಲ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ನವದೆಹಲಿಯಲ್ಲಿ ಚಾಲನೆ ನೀಡಿದರು. ರಾಷ್ಟ್ರದ 25 ಕೇಂದ್ರೀಯ ವಿದ್ಯಾಲಯ ನೂತನ ಕಟ್ಟಡಗಳಲ್ಲಿ ಕೊಡಗು ಸಹ ಒಂದಾಗಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯ ವಿದ್ಯಾನಗರದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅರ್ಜುನ್ ಸಿಂಗ್, ಮಂಗಳೂರು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್. ಯಾದವ ಹಾಗೂ ಕೇಂದ್ರ ಲೋಕೋಪಯೋಗಿ ಇಲಾಖೆಯ

(ಮೊದಲ ಪುಟದಿಂದ) ಅಧೀಕ್ಷಕ ಇಂಜಿನಿಯರ್ ನಾಯಕ್, ಕಾರ್ಯಪಾಲಕ ಇಂಜಿನಿಯರ್ ವಿಜಯ್ ಕುಮಾರ್, ಇತರರು ಇದ್ದರು.

ಉದ್ಘಾಟನೆ ನಂತರ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರು, ರಾಷ್ಟ್ರದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ತನ್ನದೇ ಆದ ಸ್ಥಾನವಿದ್ದು, ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರದ ಹಲವು ಕೇಂದ್ರೀಯ ವಿದ್ಯಾಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು ಉನ್ನತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರಿಗೆ ವರ್ಗಾವಣೆ ಇರುತ್ತದೆ. ಇಂತಹ ಸರ್ಕಾರಿ ನೌಕರರ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಇತರರಿಗೂ ಅವಕಾಶ ಸಿಗಲಿದೆ ಎಂದು ಡಾ.ಸ್ನೇಹಾ ತಿಳಿಸಿದರು.

ಭಾರತದ ಸಂವಿಧಾನ ಪ್ರಜಾಸತ್ತಾತ್ಮಕ, ಗಣರಾಜ್ಯದಲ್ಲಿ ರಾಷ್ಟ್ರದ ಏಕತೆ, ಸಾರ್ವಭೌಮತ್ವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಗುಣಮಟ್ಟದ ಶಿಕ್ಷಣ ನೀಡುವದರ ಜೊತೆಗೆ ಮಾನವೀಯ ಮೌಲ್ಯದತ್ತ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.

ಕೇಂದ್ರೀಯ ವಿದ್ಯಾಲಯದ ವಲಯ ಸಹಾಯಕ ಆಯುಕ್ತ ರಾಜುಗೋಪಾಲ್ ಸ್ವಾಗತಿಸಿದರು. ಉದ್ಘಾಟನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇತರರು ಇದ್ದರು. ವಿ.ವಿ.ಭಟ್ ಆಸ್ಮಿತಾರ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.