ಸೋಮವಾರಪೇಟೆ, ಅ. 11: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಮನೆಯ ಮುಂಭಾಗವಿದ್ದ ಸುಮಾರು 10 ವರ್ಷದ 6 ಶ್ರೀಗಂಧದ ಮರಗಳನ್ನು ನಿನ್ನೆ ರಾತ್ರಿ ಕಳ್ಳರು ಅಪಹರಿಸಿದ್ದಾರೆ.ಶಾಸಕರು ಬೆಂಗಳೂರಿನಲ್ಲಿ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸಿರುವ ಸಂದರ್ಭವೇ ಅವರ ಮನೆಯ ಅನತಿ ದೂರದಲ್ಲಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ಅಪಹರಿಸಿರುವದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.

ಕುಂಬೂರು ಗ್ರಾಮದ ಬಹದ್ದೂರ್ ಎಸ್ಟೇಟ್‍ನಲ್ಲಿರುವ ಶಾಸಕರ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಗೇಟ್ ಇದ್ದು, ಈ ಗೇಟ್‍ನಿಂದ ಮನೆಯವರೆಗೆ ತೆರಳುವ ಒಂದು ಬದಿಯಲ್ಲಿ ಶ್ರೀಗಂಧದ ಮರಗಳನ್ನು ನೆಡಲಾಗಿತ್ತು. ಅಧಿವೇಶನ ಹಿನ್ನೆಲೆ ಶಾಸಕ ರಂಜನ್ ಅವರು ಬೆಂಗಳೂರಿನಲ್ಲಿದ್ದು, ಅವರ ಪತ್ನಿಯೂ ಸಹ ಬೆಂಗಳೂರಿಗೆ ತೆರಳಿದ್ದರು.

ಗೇಟ್ ಬಳಿಯಲ್ಲಿಯೇ ವಾಚ್‍ಮೆನ್‍ನ

(ಮೊದಲ ಪುಟದಿಂದ) ಮನೆಯಿದ್ದು, ಇದರ ಪಕ್ಕದಲ್ಲಿಯೇ ಇದ್ದ 6 ಶ್ರೀಗಂಧದ ಮರಗಳನ್ನು ನಿನ್ನೆ ರಾತ್ರಿ ಕಳ್ಳರು ತುಂಡರಿಸಿ ಮಧ್ಯದ ಭಾಗಗಳನ್ನು ಮಾತ್ರ ಅಪಹರಿಸಿಕೊಂಡು ಹೋಗಿರುವದು ಆಶ್ಚರ್ಯ ಮೂಡಿಸಿದೆ.

ಕಳ್ಳತನವಾಗಿರುವ ಶ್ರೀಗಂಧದ ಮೌಲ್ಯ ಸುಮಾರು 1ಲಕ್ಷ ಇರಬಹುದು ಎಂದು ಅರಣ್ಯ ಇಲಾಖಾ ಅಧಿಕಾರಿಗಳು ಅಂದಾಜಿಸಿ ದ್ದಾರೆ. ಸೋಮವಾರ ಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಮತ್ತು ಠಾಣಾಧಿಕಾರಿ ಶಿವಶಂಕರ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಶ್ರೀಗಂಧ ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಶಾಸಕರ ಮನೆ ಸುತ್ತಮುತ್ತಲಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಕ್ರಮವಹಿಸಿದ್ದು, ಶ್ವಾನದಳವನ್ನು ಕರೆಸಿ ಸುಳಿವು ಪಡೆಯಲು ಪ್ರಯತ್ನಿಸ ಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಎ.ಸಿ.ಎಫ್. ನೆಹರು, ಆರ್.ಎಫ್.ಓ. ಶಮಾ, ಫಾರೆಸ್ಟರ್ ಚಂದ್ರೇಶ್ ಸೇರಿದಂತೆ ಇತರರು ತೆರಳಿ ಪರಿಶೀಲನೆ ನಡೆಸಿದ್ದಾರೆ.