ವೀರಾಜಪೇಟೆ, ಅ. 11: ಶ್ರೀಮಂಗಲ ಬಳಿಯ ತೂಚಮಕೇರಿ ಗ್ರಾಮದ ನಿವಾಸಿ ಎಂ.ಎನ್.ನರೇಂದ್ರ ಅವರಿಂದ ಇಂದು ರೂ. 2000 ಲಂಚ ಸ್ವೀಕರಿಸುತ್ತಿದ್ದಾಗ ತಹಶೀಲ್ದಾರ್ ಕೆ.ಪುರಂದರ ಅವರು ಎ.ಸಿ.ಬಿ. ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣದ ಮಧ್ಯವರ್ತಿಯಾಗಿ ಲಂಚ ನೀಡಲು ಸಹಕರಿಸಿದ ಕಚೇರಿಯ ಎರಡನೇ ದರ್ಜೆ ಗುಮಾಸ್ತ ಜಾಗೃತ್‍ನ್ನು ತಂಡ ಇಂದು ಬಂಧಿಸಿದೆ.ನರೇಂದ್ರ ಅವರ ಸ್ವಾಧೀನದಲ್ಲಿರುವ 20ಸೆಂಟು ಜಾಗವನ್ನು ಜಿಲ್ಲಾಧಿಕಾರಿ ಭೂ ಪರಿವರ್ತನೆಗೆ ಶಿಫಾರಸು ಮಾಡಿ ತಾಲೂಕು ಕಚೇರಿಗೆ ಕಳಿಸಿದ್ದರು. ಭೂ ಪರಿವರ್ತನೆ ಮುಂದುವರೆಸಲು ಅರ್ಜಿದಾರರಿಂದ ತಹಶೀಲ್ದಾರ್ ಪುರಂದರ ಹಾಗೂ ಸಿಬ್ಬಂದಿ ಜಾಗೃತ್ ಅವರು ರೂ. 15000ಕ್ಕೆ ಬೇಡಿಕೆ ಇಟ್ಟಿದ್ದು ಕೊನೆಗೆ ರೂ 9000 ನಿಗಧಿ ಪಡಿಸಿ ಈ ಹಿಂದೆ ರೂ 7000 ಪಾವತಿಸಿದ್ದರು. ರೂ 2000 ಪಾವತಿಸುವ ಮುನ್ನ ಮಡಿಕೇರಿಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ನರೇಂದ್ರ ದೂರು ನೀಡಿದ್ದರು. ಭ್ರಷ್ಟಾಚಾರ ನಿಗ್ರಹ ದಳದವರು ಇಂದು ತಾಲೂಕು ಕಚೇರಿಯ ತಹಶೀಲ್ದಾರ್ ಕಚೇರಿಯಲ್ಲಿ ದಾಳಿ ನಡೆಸಿದರು.

ಮಡಿಕೇರಿ ಎ.ಸಿ.ಬಿ. ಕಚೇರಿಯ ಇನ್‍ಚಾರ್ಜ್ ಡಿವೈಎಸ್‍ಪಿ, ಹಾಸನ ಕಚೇರಿಯ ಪೂರ್ಣಚಂದ್ರ ತೇಜಸ್ವಿ ಅವರ ನೇತೃತ್ವದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಧರ್, ಮಹೇಶ್, ಹೆಡ್ ಕಾನ್ಸ್‍ಟೇಬಲ್‍ಗಳಾದ ದಿನೇಶ್, ರಾಜೇಶ್, ಸುರೇಶ್ ಹಾಗೂ ಇತರ ಸಿಬ್ಬಂದಿಗಳು ಸೇರಿದಂತೆ ಒಟ್ಟು 18 ಮಂದಿ ಬೆಳಗ್ಗಿನ ದಾಳಿಯಲ್ಲಿ ಭಾಗವಹಿಸಿದ್ದರು.

ತಹಶೀಲ್ದಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 7(ಎ), ಪಿ.ಸಿ.ಕಲಂ 1988 ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಎಸಿಬಿ ತಂಡ ಬಂಧಿಸಿರುವ ಇಬ್ಬರನ್ನು ಮಡಿಕೇರಿಯ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.